ಚಿಂಚೋಳಿ| ಅತಿವೃಷ್ಟಿ ಹಾನಿ ಪರಿಹಾರ ಹಾಗೂ ನೀರಾವರಿ ಕಾಲುವೆಗಳ ದುರಸ್ತಿಗೆ ಆಗ್ರಹಿಸಿ ಕೆಪಿಆರ್‌ಎಸ್ ಪ್ರತಿಭಟನೆ

ಕಲಬುರಗಿ: ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿರುವ ರೈತರಿಂದ ಬಲವಂತದ ಕರ ವಸೂಲಿಯನ್ನು ನಿಲ್ಲಿಸಬೇಕು ಮತ್ತು ನೀರಾವರಿ ಕಾಲುವೆಗಳ ಹೂಳೆತ್ತುವ ಕಾಮಗಾರಿಗೆ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ (KPRS) ಶನಿವಾರ ಚಿಂಚೋಳಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.
ಚಿಂಚೋಳಿ ತಾಲ್ಲೂಕು ಪಂಚಾಯತ ಕಚೇರಿ ಎದುರು ಜಮಾಯಿಸಿದ ರೈತ ಸಂಘದ ಕಾರ್ಯಕರ್ತರು, ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ರೈತ ಮುಖಂಡ ಶರಣಬಸಪ್ಪ ಮಮಶೆಟ್ಟಿ, ಅತಿವೃಷ್ಟಿಯಿಂದ ತೊಗರಿ, ಉದ್ದು, ಹೆಸರು, ಸೋಯಾ, ಮತ್ತು ಹತ್ತಿ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ರೈತರು ಆರ್ಥಿಕವಾಗಿ ಕಂಗಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ, ಗ್ರಾಮ ಪಂಚಾಯತಿಗಳು ಗ್ರಾಮೀಣ ಜನರಿಂದ ಬಲವಂತವಾಗಿ ಕರ ವಸೂಲಿ ಮಾಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕು. ಕೇವಲ ಕಮರ್ಷಿಯಲ್ ತೆರಿಗೆಯನ್ನು ಮಾತ್ರ ಸಂಗ್ರಹಿಸಬೇಕು ಎಂದು ಒತ್ತಾಯಿಸಿದರು.
ನೀರಾವರಿ ಕಾಲುವೆಗಳ ದುರಸ್ತಿ ಮತ್ತು ನೀರು
ಮುಲ್ಲಾಮಾರಿ ಕೆಳದಂಡೆ ಯೋಜನೆಯ ಮುಖ್ಯ ಕಾಲುವೆಗಳು ಮತ್ತು ಮರಿ ಕಾಲುವೆಗಳು ಹೂಳು ತುಂಬಿ, ಗಿಡಗಂಟಿಗಳು ಬೆಳೆದು ಹಾಳಾಗಿವೆ. ತಕ್ಷಣವೇ ಕಾಲುವೆಗಳ ಹೂಳೆತ್ತಿ ದುರಸ್ತಿ ಮಾಡಬೇಕು.
ಚಂದ್ರಂಪಳ್ಳಿ ಜಲಾಶಯದಿಂದ ಹಿಂಗಾರು ಬೆಳೆಗಳಾದ ತೊಗರಿ, ಜೋಳ, ಕುಸುಬಿ, ಕಡಲೆ ಇತ್ಯಾದಿಗಳಿಗೆ ತಕ್ಷಣ ನೀರು ಹರಿಸಬೇಕು ಎಂದರು.
ಸಣ್ಣ ನೀರಾವರಿ ಕೆರೆಗಳು ಮತ್ತು ಕಾಲುವೆಗಳ ದುರಸ್ತಿಗಾಗಿ ಮುಂಬರುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಚರ್ಚಿಸಿ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ (MGNREGA) ಫಾರಂ ನಂ 6ಎ ಸಲ್ಲಿಸಿದ ಎಲ್ಲ ಕಾರ್ಮಿಕರಿಗೆ ತಕ್ಷಣ ಕೆಲಸ ನೀಡಬೇಕು. ಮಿರಿಯಾಣ, ನಾಗಾಇದಲಾಯಿ, ಸಾಲೆಬೀರನಹಳ್ಳಿ, ಕರಚಖೇಡ, ಕನಕಪುರ, ಶಾದಿಪುರ ಮತ್ತು ಚಂದನಕೇರಾ ಗ್ರಾಮ ಪಂಚಾಯತಿಗಳಲ್ಲಿ ಕೂಲಿಕಾರರಿಗೆ ತಕ್ಷಣ ಕೆಲಸ ಒದಗಿಸಬೇಕು ಹಾಗೂ ಉದ್ಯೋಗ ಚೀಟಿ ಇಲ್ಲದವರಿಗೆ ಸರಳವಾಗಿ ಹೊಸ ಚೀಟಿ ವಿತರಿಸಬೇಕು. ಚಂದ್ರಂಪಳ್ಳಿ ಅಭಿವೃದ್ಧಿ ಅನುದಾನ ಚಂದ್ರಂಪಳ್ಳಿ ಜಲಾಶಯವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಸರ್ಕಾರದಿಂದ ಬಂದ ಲಕ್ಷಾಂತರ ರೂಪಾಯಿ ಅನುದಾನ ಖರ್ಚಾಗಿದ್ದರೂ ಯಾವುದೇ ಅಭಿವೃದ್ಧಿ ಕಾಣುತ್ತಿಲ್ಲ.
ಈ ಹಣ ದುರ್ಬಳಕೆಯ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಚಿಂಚೋಳಿ ಅಧ್ಯಕ್ಷರಾದ ಜಾಫರ್ ಖಾನ್, ಕಾರ್ಯದರ್ಶಿ ವೈಜಿನಾಥ ಸಾತಪ್ಪನೋರ, ಉಪಾಧ್ಯಕ್ಷರಾದ ಶಂಕ್ರಯ್ಯಾ ಸ್ವಾಮಿ ಸೇರಿದಂತೆ ಹಲವು ರೈತ ಮುಖಂಡರು ಮತ್ತು ಸಂಘದ ಕಾರ್ಯಕರ್ತರು ಉಪಸ್ಥಿತರಿದ್ದರು.







