Chincholi | ‘ನಮ್ಮೂರು ನಮ್ಮ ಕೆರೆ’ ಯೋಜನೆಯಡಿ ಕುಪನೂರು ಕೆರೆ ಗ್ರಾಮ ಪಂಚಾಯತ್‌ಗೆ ಹಸ್ತಾಂತರ

ಚಿಂಚೋಳಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮದಡಿ ಪುನಶ್ಚೇತನಗೊಳಿಸಲಾದ ತಾಲೂಕಿನ ಕುಪನೂರು ಗ್ರಾಮದ ಕೆರೆಯನ್ನು ಗ್ರಾಮ ಪಂಚಾಯಿತಿ ಹಾಗೂ ಕೆರೆ ಸಮಿತಿಗೆ ಹಸ್ತಾಂತರಿಸುವ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು.
ಕಾರ್ಯಕ್ರಮದಲ್ಲಿ ಕೆರೆಯ ನಾಮಫಲಕ ಅನಾವರಣ, ಬಾಗಿನ ಅರ್ಪಣೆ ಹಾಗೂ ಕೆರೆ ಹಸ್ತಾಂತರ ಕಾರ್ಯಕ್ರಮ ನೆರವೇರಿತು. ಗ್ರಾಮದಲ್ಲಿನ ಮುತ್ತೈದೆಯರು ಕಳಸ ಹೊತ್ತು ಗಣ್ಯರನ್ನು ಮೆರವಣಿಗೆ ಮೂಲಕ ಸ್ವಾಗತಿಸಿದರು. ರಾಜ್ಯ ರೈತ ಪ್ರತಿನಿಧಿ ಬಸವರಾಜ ಪಾಟೀಲ್ ಊಡಗಿ ನಾಮಫಲಕ ಅನಾವರಣಗೊಳಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಪೂರಕವಾಗಿ ಗ್ರಾಮಸ್ಥರನ್ನು ಒಗ್ಗೂಡಿಸಿಕೊಂಡು ಸಾಮಾಜಿಕ ಸೇವೆಗಳನ್ನು ಕೈಗೊಳ್ಳುತ್ತಿರುವುದು ಶ್ಲಾಘನೀಯ. ‘ನಮ್ಮೂರು ನಮ್ಮ ಕೆರೆ’ ಯೋಜನೆಯಿಂದ ಗ್ರಾಮಸ್ಥರಲ್ಲಿ ಕೆರೆ ಸಂರಕ್ಷಣೆಯ ಜವಾಬ್ದಾರಿ ಮತ್ತು ಸ್ವಾಮ್ಯ ಭಾವನೆ ಮೂಡುತ್ತಿದೆ ಎಂದು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಗಣಪತಿ ಮಾಳಂಜಿ ಗ್ರಾಮ ಪಂಚಾಯಿತಿ ಹಾಗೂ ಕೆರೆ ಸಮಿತಿಗೆ ಕೆರೆಯನ್ನು ಅಧಿಕೃತವಾಗಿ ಹಸ್ತಾಂತರಿಸಿ ಮಾತನಾಡಿ, ಸಂಸ್ಥೆಯ ವಿವಿಧ ಸಾಮಾಜಿಕ ಸೇವಾ ಕಾರ್ಯಗಳ ಕುರಿತು ಮಾಹಿತಿ ನೀಡಿದರು. ಕೆರೆಗಳ ಪುನಶ್ಚೇತನದಿಂದ ರೈತರಿಗೆ, ಪ್ರಾಣಿ–ಪಕ್ಷಿಗಳಿಗೆ ಹಾಗೂ ಪರಿಸರಕ್ಕೆ ಹೆಚ್ಚಿನ ಅನುಕೂಲವಾಗಲಿದ್ದು, ಗ್ರಾಮಸ್ಥರು ಕೆರೆಯನ್ನು ಸಂರಕ್ಷಿಸಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಕೆರೆ ಸಮಿತಿ ಅಧ್ಯಕ್ಷ ಶೇಕ್ ಅಹಮದ್ ಪಾಟೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆರೆಯ ಪುನಶ್ಚೇತನದಿಂದ ಗ್ರಾಮಕ್ಕೆ ಹೊಸ ರೂಪ ಸಿಕ್ಕಿದ್ದು, ನೀರಿನ ಸಂಗ್ರಹ ಸಾಮರ್ಥ್ಯವೂ ಹೆಚ್ಚಾಗಿದೆ. ಈ ಕಾರ್ಯಕ್ಕೆ ಧರ್ಮಸ್ಥಳ ಸಂಸ್ಥೆಗೆ ಗ್ರಾಮಸ್ಥರ ಪರವಾಗಿ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮಕ್ಕೆ ಸಿದ್ದರಾಮೇಶ್ವರ ಹಿರೇಮಠ ಹಾಗೂ ಚಿನ್ನಾಯಿದಲಾಯಿ ಮಠದ ಷ.ಬ್ರ. ವಿಜಯ ಮಹಾಂತೇಶ್ವರ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ನೀರು ಪ್ರತಿಯೊಂದು ಜೀವಿಗೂ ಅಮೂಲ್ಯ ಸಂಪತ್ತಾಗಿದ್ದು, ಕೆರೆಗಳ ನಿರ್ಮಾಣ ಮತ್ತು ಪುನಶ್ಚೇತನ ಪುಣ್ಯದ ಕಾರ್ಯವಾಗಿದೆ. ಗ್ರಾಮಸ್ಥರು ಕೆರೆಯನ್ನು ಸ್ವಚ್ಛವಾಗಿ ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ಉಳಿಸಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸುಲೇಪೇಟೆ ಪಿಎಸ್‌ಐ ಅಮರ್ ಕುಲಕರ್ಣಿ, ಪಿಡಿಒ ನಾಗೇಂದ್ರಪ್ಪ ಬಡಕಪಳ್ಳಿ, ಜನಜಾಗೃತಿ ವೇದಿಕೆ ಉಪಾಧ್ಯಕ್ಷೆ ನರಸಮ್ಮ ಲಕ್ಷ್ಮಣ ಆವಂಟಿ, ಸದಸ್ಯ ಸುರೇಶ್ ದೇಶಪಾಂಡೆ, ಕೆರೆ ಅಭಿಯಂತರ ಆನಂದ್ ಸ್ವಾಮಿ, ಮೆಹಬೂಬ್ ಅಲಿ ನಾಗುರ್, ನಿಜಮುದ್ದೀನ್ ಹಾಲ್‌ವಾಲೆ, ಇಮಾಮ್ ಸಾಬ್, ಶಾಂತಾಬಾಯಿ, ಶಾಕಿರ್ ಐನಳ್ಳಿ, ಬಾಬುಮಿಯ ಕೆರೋಳ್ಳಿ, ರವಿ ದೊಡ್ಮನಿ, ವಲಯ ಮೇಲ್ವಿಚಾರಕಿ ನಿಂಗಮ್ಮ, ಸೇವಾ ಪ್ರತಿನಿಧಿ ಮಂಜುಳಾ, ಮಲ್ಲಿನಾಥ್ ಸುನಗಾಮಠ್ ಸೇರಿದಂತೆ ಒಕ್ಕೂಟದ ಪದಾಧಿಕಾರಿಗಳು, ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ಕೃಷಿ ಮೇಲ್ವಿಚಾರಕ ಸತೀಶ್ ಕೆ.ಎಚ್. ನಿರೂಪಿಸಿದರು. ಕೆರೆ ಸಮಿತಿ ಗೌರವಾಧ್ಯಕ್ಷ ಜಗದೇವಯ್ಯ ಮಠಪತಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಯೋಜನಾಧಿಕಾರಿ ಕೇಶವ್ ಡಿ.ಎಸ್. ವಂದಿಸಿದರು.






