Chincholi | ಸುಲೇಪೇಟವನ್ನು ನೂತನ ತಾಲೂಕು ಕೇಂದ್ರವನ್ನಾಗಿ ಘೋಷಿಸಲು ಆಗ್ರಹಿಸಿ ಬೃಹತ್ ಪ್ರತಿಭಟನೆ

ಚಿಂಚೋಳಿ: ಸುಲೇಪೇಟ ಹೋಬಳಿ ವ್ಯಾಪ್ತಿಯ ಗ್ರಾಮಗಳ ಸಮಗ್ರ ಅಭಿವೃದ್ಧಿ ಹಾಗೂ ಆಡಳಿತಾತ್ಮಕ ಅನುಕೂಲಕ್ಕಾಗಿ ಸುಲೇಪೇಟ ಗ್ರಾಮವನ್ನು ನೂತನ ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿ ಸುಲೇಪೇಟ ತಾಲೂಕು ಬೇಡಿಕೆ ಸಮಿತಿಯ ನೇತೃತ್ವದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಸುಲೇಪೇಟ ಗ್ರಾಮದ ಬಸವೇಶ್ವರ ವೃತ್ತದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಮೂರ್ತಿಯ ಎದುರು ಬೆಳಿಗ್ಗೆ 9 ಗಂಟೆಗೆ ಆರಂಭವಾದ ಪ್ರತಿಭಟನೆ ಮಧ್ಯಾಹ್ನ 2 ಗಂಟೆಯವರೆಗೆ ನಡೆಯಿತು. ಬಳಿಕ ಪ್ರತಿಭಟನಾಕಾರರು ಚಿಂಚೋಳಿ ತಹಸೀಲ್ದಾರ್ ಶಿವಾನಂದ ಮೈತ್ರಿ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು, ಸುಲೇಪೇಟ ಗ್ರಾಮವು ರಾಷ್ಟ್ರಕೂಟರು ಹಾಗೂ ನಿಜಾಮರ ಕಾಲದಿಂದಲೂ ಐತಿಹಾಸಿಕ ಮಹತ್ವ ಹೊಂದಿದ್ದು, ಹಿಂದೆ ವಾಣಿಜ್ಯ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿತ್ತು. ಆದರೆ, ಪ್ರಸ್ತುತ ಚಿಂಚೋಳಿ ತಾಲೂಕಿನ ಗಡಿ ಭಾಗದಲ್ಲಿರುವುದರಿಂದ ಸುಲೇಪೇಟ ಹೋಬಳಿ ವ್ಯಾಪ್ತಿಯ ಗ್ರಾಮಗಳ ಜನರು ಕಂದಾಯ ಸೇರಿದಂತೆ ವಿವಿಧ ಸರ್ಕಾರಿ ಕೆಲಸಗಳಿಗಾಗಿ ಚಿಂಚೋಳಿ ಪಟ್ಟಣಕ್ಕೆ ತೆರಳಬೇಕಾದ ಅನಿವಾರ್ಯತೆ ಇದೆ. ಇದರಿಂದ ಸಾರ್ವಜನಿಕರು ಹೆಚ್ಚಿನ ಸಮಯ ಹಾಗೂ ಹಣ ವ್ಯಯಿಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುಲೇಪೇಟ ಈಗಾಗಲೇ ಹೋಬಳಿ ಕೇಂದ್ರವಾಗಿದ್ದು, ಪೊಲೀಸ್ ಠಾಣೆ, ರೈತ ಸಂಪರ್ಕ ಕೇಂದ್ರ, ಆಸ್ಪತ್ರೆ, ಐಟಿಐ ಹಾಗೂ ಪದವಿ ಕಾಲೇಜು ಸೇರಿದಂತೆ ಪ್ರಮುಖ ಸರ್ಕಾರಿ ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ಹೊಂದಿದೆ. ತಾಲೂಕು ಕೇಂದ್ರವಾಗಲು ಅಗತ್ಯವಾದ ಮೂಲಸೌಕರ್ಯ ಹಾಗೂ ಭೌಗೋಳಿಕ ಮಹತ್ವವೂ ಇದೆ. ಹೀಗಾಗಿ ಸುಲೇಪೇಟವನ್ನು ಪ್ರತ್ಯೇಕ ತಾಲೂಕಾಗಿ ಘೋಷಿಸುವುದು ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದೆ ಎಂದು ಒತ್ತಾಯಿಸಿದರು.
ಚಿಂಚೋಳಿ ತಾಲೂಕು ರಾಜ್ಯದ ಹಿಂದುಳಿದ ತಾಲೂಕುಗಳಲ್ಲಿ ಒಂದಾಗಿದ್ದು, ಗಡಿ ಭಾಗದ ಗ್ರಾಮಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಬೇಕಿದೆ. ಸುಲೇಪೇಟವನ್ನು ಪ್ರತ್ಯೇಕ ತಾಲೂಕಾಗಿ ಘೋಷಿಸಿದರೆ ಆಡಳಿತಾತ್ಮಕ ವಿಕೇಂದ್ರೀಕರಣದ ಜತೆಗೆ ಆರ್ಥಿಕ, ಶೈಕ್ಷಣಿಕ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೂ ವೇಗ ದೊರೆಯಲಿದೆ. ಸ್ಥಳೀಯವಾಗಿ ಉತ್ತಮ ನಾಯಕತ್ವ ಮತ್ತು ಅಭಿವೃದ್ಧಿಯ ಸಾಮರ್ಥ್ಯ ಹೊಂದಿರುವ ಸುಲೇಪೇಟ ಮುಂದಿನ ದಿನಗಳಲ್ಲಿ ಮಾದರಿ ತಾಲೂಕು ಕೇಂದ್ರವಾಗಿ ರೂಪುಗೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.
ಹೋರಾಟ ಕೈಬಿಡುವುದಿಲ್ಲ :
ಸುಲೇಪೇಟವನ್ನು ತಾಲೂಕು ಎಂದು ಸರ್ಕಾರ ಅಧಿಕೃತವಾಗಿ ಘೋಷಿಸುವವರೆಗೂ ಹೋರಾಟ ನಿಲ್ಲಿಸುವುದಿಲ್ಲ. ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ತೀವ್ರ ಸ್ವರೂಪದ ಹೋರಾಟಗಳನ್ನು ರೂಪಿಸಲಾಗುವುದು ಎಂದು ತಾಲೂಕು ಬೇಡಿಕೆ ಸಮಿತಿಯ ಮುಖಂಡರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಮಹಾರುದ್ರಪ್ಪ ದೇಸಾಯಿ, ತಾಹೇರ್ ಪಟೇಲ್, ಶರಣು ಮೆಡಿಕಲ್, ಮುಕುಂದ ದೇಶಪಾಂಡೆ, ಶಿವಕುಮಾರ ಸೊಂತ, ಮಾಣಿಕರಾವ ಗುಲಗುಂಜಿ, ರುದ್ರಮುನಿ ರಾಮತೀರ್ಥಕರ್, ಶಿವಕುಮಾರ ಸಜ್ಜನ, ಪಾಶಾ ಮೋಮಿನ್, ಲಾಡ್ಲೆ ಸಾಬ್, ರಾಜಕ್ ಪಟೇಲ್, ಅಶೋಕ ರೆಡ್ಡಿ, ಸಿದ್ದಯ್ಯ ಸ್ವಾಮಿ, ಮಹೇಶ ಬೆಳಮಗಿ, ಗೋವಿಂದ ರಾಠೋಡ ಸೇರಿದಂತೆ ಹಲವು ಮುಖಂಡರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.






