Chincholi | ಸಿದ್ದರಾಮಯ್ಯರ ಪ್ರತಿಮೆ ತೆರವು ಖಂಡಿಸಿ ರಾಜ್ಯಪಾಲರಿಗೆ ಮನವಿ

ಚಿಂಚೋಳಿ : ಕಲಬುರಗಿ ನಗರದಲ್ಲಿ ಅಭಿಮಾನಿಗಳು ಪ್ರತಿಷ್ಠಾಪಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂರ್ತಿಯನ್ನು ಮಹಾನಗರ ಪಾಲಿಕೆ ತೆರವುಗೊಳಿಸಿರುವುದನ್ನು ಖಂಡಿಸಿ ಕರ್ನಾಟಕ ಪ್ರದೇಶಗೊಂಡ ಕುರುಬರ ಸಂಘ ಹಾಗೂ ಹಿಂದುಳಿದ ಜಾತಿಗಳ ಒಕ್ಕೂಟದ ವತಿಯಿಂದ ಚಿಂಚೋಳಿಯಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನಾಕಾರರು ಮಾತನಾಡಿ, ಸಿದ್ದರಾಮಯ್ಯ ಅವರ ಮೂರ್ತಿ ತೆರವುಗೊಳಿಸಿರುವುದು ಶೋಷಿತರು, ದಲಿತರು ಹಾಗೂ ಹಿಂದುಳಿದ ಸಮುದಾಯಗಳ ಭಾವನೆಗಳಿಗೆ ಧಕ್ಕೆ ತರುವ ಕ್ರಮವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾಮಾಜಿಕ ನ್ಯಾಯ ಮತ್ತು ಹಿಂದುಳಿದ ವರ್ಗಗಳ ಪರವಾಗಿ ಹೋರಾಟ ನಡೆಸಿದ ನಾಯಕರ ಮೂರ್ತಿಯನ್ನು ತೆರವುಗೊಳಿಸಿರುವುದು ಸಮುದಾಯಕ್ಕೆ ಅಪಮಾನವಾಗಿದೆ. ತೆರವುಗೊಳಿಸಿದ ಅದೇ ಸ್ಥಳದಲ್ಲಿ ಸಿದ್ದರಾಮಯ್ಯ ಅವರ ಮೂರ್ತಿಯನ್ನು ಮರು ಪ್ರತಿಷ್ಠಾಪಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಹಿಂದುಳಿದ ವರ್ಗಗಳ ಹಕ್ಕು, ಗೌರವ ಮತ್ತು ಭಾವನೆಗಳನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಕರ್ನಾಟಕ ಪ್ರದೇಶಗೊಂಡ ಕುರುಬರ ಸಂಘದ ಅಧ್ಯಕ್ಷ ಹಣಮಂತ ಕೆ. ಪೂಜಾರಿ, ಕಾಳಗಿ ಅಧ್ಯಕ್ಷ ರೇವಣಸಿದ್ಧಪ್ಪ ಅಣಕಲ್, ಕೆ.ಎಂ. ಭಾರಿ, ಶ್ರೀಮಂತ ಕಟ್ಟಿಮನಿ, ಗೋಪಾಲ್ ಎಂ.ಪಿ., ಮಲ್ಲಿಕಾರ್ಜುನ ಸಕ್ರಿ, ರಂಗಣ್ಣ ಚಂದ್ರಂಪಳ್ಳಿ, ಶಿವಾನಂದ ಪೂಜಾರಿ, ಶರಣಪ್ಪ ಪೂಜಾರಿ, ರವಿ ದಸ್ತಾಪೂರ, ರಾಜಕುಮಾರ ಕನಕಪುರ, ಸಂತೋಷ ಸುಲೇಪೇಟ, ವಿಠ್ಠಲ್ ಕುಸಾಳೆ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.






