ಚಿಂಚೋಳಿ | ವಿದ್ಯುತ್ ಸಂಪರ್ಕ ಕಡಿತ: ನೀರಿಲ್ಲದೆ ಒಣಗುತ್ತಿರುವ ಬೆಳೆಗಳು; ರೈತರಿಂದ ಆಕ್ರೋಶ

ಚಿಂಚೋಳಿ: ತಾಲೂಕಿನ ಕೊಟಗಾ ಗ್ರಾಮದ ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿರುವುದರಿಂದ ಹೊಲಗಳಿಗೆ ನೀರು ಹಾಯಿಸಲು ಸಾಧ್ಯವಾಗದೆ ಬೆಳೆಗಳು ಒಣಗುತ್ತಿವೆ. ಸಾಲ ಮಾಡಿ ಬಿತ್ತನೆ ಮಾಡಿದ್ದ ರೈತರು ಬೆಳೆಗಳು ಒಣಗುತ್ತಿರುವುದರಿಂದ ಜೆಸ್ಕಾಂ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದ ರೈತರ ಹೊಲಗಳಿಗೆ ವಿದ್ಯುತ್ ಪೂರೈಸುವ ಮುಖ್ಯ ವಿದ್ಯುತ್ ಲೈನ್ ಹಾಗೂ ಟ್ರಾನ್ಸ್ಫಾರ್ಮರ್ನಿಂದ ಸಂಪರ್ಕ ಕಲ್ಪಿಸುವ ಪ್ರಮುಖ ಕೇಬಲ್ಗಳು ಸುಟ್ಟು ಕರಕಲಾಗಿದೆ. ಆದರೂ, ಸಂಬಂಧಪಟ್ಟ ಅಧಿಕಾರಿಗಳು ದುರಸ್ತಿಗೆ ಮುಂದಾಗಿಲ್ಲ ಎಂದು ಗ್ರಾಮಸ್ಥರ ಆರೋಪಿಸಿದ್ದಾರೆ.
ವಿದ್ಯುತ್ ಸಮಸ್ಯೆ ಪರಿಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಗ್ರಾಮದ ಯುವ ಮುಖಂಡ ಕಿರಣ್ ಪಾಟೀಲ್ ಮಾತನಾಡಿ, “ವಿದ್ಯುತ್ ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ವಿದ್ಯುತ್ ಸಂಪರ್ಕವಿಲ್ಲದೆ ರೈತರ ಬೆಳೆಗಳು ಒಣಗುತ್ತಿವೆ. ಗ್ರಾಮಸ್ಥರು ಮತ್ತು ಜಾನುವಾರುಗಳಿಗೆ ಆಧಾರವಾಗಿರುವ ಕೆರೆಯೂ ಬತ್ತುವ ಹಂತ ತಲುಪಿದೆ. ಆದರೂ ಅಧಿಕಾರಿಗಳು ಸಮಸ್ಯೆ ಪರಿಹರಿಸಲು ಮುಂದಾಗದಿರುವುದು ಖಂಡನೀಯ. ತಕ್ಷಣ ಸುಟ್ಟುಹೋದ ಕೇಬಲ್ಗಳನ್ನು ಬದಲಾಯಿಸಿ, ವಿದ್ಯುತ್ ಸಂಪರ್ಕವನ್ನು ಪುನಃ ಕಲ್ಪಿಸಬೇಕು ಎಂದು ಒತ್ತಾಯಿಸಿದರು.






