Chincholi | ಆಹಾರ ಪಡಿತರ ಸೇವೆಯಲ್ಲಿ ಸರ್ವರ್ ಸಮಸ್ಯೆ : ಸಾರ್ವಜನಿಕರ ಆಕ್ರೋಶ

ಚಿಂಚೋಳಿ : ಆಹಾರ ಪಡಿತರ ಚೀಟಿ ಸಂಬಂಧಿತ ಸೇವೆಗಳಲ್ಲಿ ನಿರಂತರ ಸರ್ವರ್ ಸಮಸ್ಯೆ ಎದುರಾಗುತ್ತಿರುವ ಹಿನ್ನೆಲೆ ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದು, ಸಮಸ್ಯೆಯನ್ನು ತಕ್ಷಣ ಪರಿಹರಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಆಗ್ರಹಿಸಿದೆ.
ಈ ಕುರಿತು ಸಂಘಟನೆಯ ಅಧ್ಯಕ್ಷ ಲಿಂಬಾಜಿ ಚವ್ಹಾಣ್ ಪ್ರಕಟಣೆ ನೀಡಿದ್ದು, ಕಳೆದ ಎರಡು–ಮೂರು ದಿನಗಳಿಂದ ಸಾರ್ವಜನಿಕರು ಆಹಾರ ಪಡಿತರ ಚೀಟಿ ಸಂಬಂಧಿತ ಕೆಲಸಗಳಿಗಾಗಿ ನಿರಂತರವಾಗಿ ಕಚೇರಿಗಳಿಗೆ ಅಲೆದಾಡುತ್ತಿದ್ದರೂ “ಸರ್ವರ್ ಇಲ್ಲ” ಎಂಬ ಉತ್ತರವೇ ಸಿಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಡ ಹಾಗೂ ಗ್ರಾಮೀಣ ಭಾಗದ ಜನರು ತಮ್ಮ ದಿನಗೂಲಿ, ಕೃಷಿ ಕೆಲಸ, ವ್ಯಾಪಾರ ಸೇರಿದಂತೆ ದೈನಂದಿನ ಉದ್ಯೋಗಗಳನ್ನು ಬಿಟ್ಟು ದೂರದ ಊರುಗಳಿಂದ ಕಚೇರಿಗಳಿಗೆ ಬರುತ್ತಿದ್ದಾರೆ. ಆದರೆ ಸರ್ವರ್ ಸಮಸ್ಯೆಯಿಂದ ಯಾವುದೇ ಕೆಲಸ ಆಗದೇ ಜನರು ಸಮಯ, ಹಣ ಹಾಗೂ ಶ್ರಮ ವ್ಯರ್ಥ ಮಾಡಿಕೊಳ್ಳುವಂತಾಗಿದೆ ಎಂದು ಅವರು ದೂರಿದ್ದಾರೆ.
ರಾಜ್ಯದ ಹಲವು ಕಡೆಗಳಲ್ಲಿಯೂ ಆಹಾರ ಇಲಾಖೆ ಸೇವೆಗಳು ಸರ್ವರ್ ಸಮಸ್ಯೆಯಿಂದ ಅಸ್ತವ್ಯಸ್ತಗೊಂಡಿರುವ ಕುರಿತು ವರದಿಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಸರ್ವರ್ ವ್ಯವಸ್ಥೆ ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಲಾಗಿದೆ.
ಅಧಿಕಾರಿಗಳು ಕಚೇರಿಗಳಲ್ಲಿ ಸರಿಯಾದ ಮಾಹಿತಿ ನೀಡಬೇಕು, ಗ್ರಾಮೀಣ ಭಾಗದ ಜನರಿಗೆ ವಿಶೇಷ ಸೌಲಭ್ಯ ಕಲ್ಪಿಸಬೇಕು ಹಾಗೂ ಸಾರ್ವಜನಿಕರನ್ನು ಅನಾವಶ್ಯಕವಾಗಿ ಅಲೆದಾಡಿಸಬಾರದು ಎಂದು ಸಂಘಟನೆ ಒತ್ತಾಯಿಸಿದೆ.
ಜನರ ಸಮಸ್ಯೆಗೆ ಸ್ಪಂದಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದ್ದು, ಸಾಮಾನ್ಯ ಜನರ ಸಹನೆಯನ್ನು ಪರೀಕ್ಷಿಸಬಾರದು ಎಂದು ಲಿಂಬಾಜಿ ಚವ್ಹಾಣ್ ಎಚ್ಚರಿಸಿದ್ದಾರೆ.






