Chincholi| ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರು ಮೃತ್ಯು

ಕಲಬುರಗಿ: ಮಣ್ಣು ಗಣಿಗಾರಿಕೆಯಿಂದ ನಿರ್ಮಾಣವಾಗಿದ್ದ ಹೊಂಡದಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಚಿಂಚೋಳಿ ತಾಲ್ಲೂಕಿನ ಕುಂಚಾವರಂ ಸಮೀಪದ ತೆಲಂಗಾಣ ಗಡಿ ಪ್ರದೇಶದಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಮೃತರನ್ನು ಕುಂಚಾವರಂ ಗ್ರಾಮದ ಅಜಯ್ (15) ಮತ್ತು ಸುರೇಂದ್ರ (15) ಎಂದು ಗುರುತಿಸಲಾಗಿದೆ.
ಶುಕ್ರವಾರ ಸಂಜೆ ಹೊಂಡದ ಬಳಿ ತೆರಳಿದ್ದ ಇಬ್ಬರು ಬಾಲಕರು ನೀರಿಗಿಳಿದು ಈಜಲು ಹೋಗಿದ್ದಾರೆ ಎನ್ನಲಾಗಿದೆ. ಹೊಂಡದಲ್ಲಿ ನೀರು ಆಳವಾಗಿದ್ದರಿಂದ ಇಬ್ಬರೂ ಮುಳುಗಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆ ಕುರಿತು ಮಾಹಿತಿ ತಿಳಿದ ಸ್ಥಳೀಯರು, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿ ಬಾಲಕರ ಶವಗಳನ್ನು ಹೊರತೆಗೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಲಾ 55 ಲಕ್ಷ ರೂ. ಪರಿಹಾರಕ್ಕೆ ಆಗ್ರಹ :
ಇಬ್ಬರು ಬಾಲಕರ ಅಕಾಲಿಕ ಸಾವಿಗೆ ಸಂತಾಪ ಸೂಚಿಸಿರುವ ಕರ್ನಾಟಕ ರಕ್ಷಣಾ ವೇದಿಕೆ–ಸ್ವಾಭಿಮಾನಿ ಸೇನೆಯ ಚಿಂಚೋಳಿ ತಾಲ್ಲೂಕು ಅಧ್ಯಕ್ಷ ಲಿಂಬಾಜಿ ಚವ್ಹಾಣ್, ಮೃತರ ಕುಟುಂಬಗಳಿಗೆ ತಲಾ 55 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಘಟನೆಯ ಕುರಿತು ಸಮಗ್ರ ತನಿಖೆ ನಡೆಸಿ, ನಿರ್ಲಕ್ಷ್ಯ ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಗಣಿಗಾರಿಕೆಯಿಂದ ನಿರ್ಮಾಣವಾಗಿರುವ ಅಪಾಯಕಾರಿ ಹೊಂಡಗಳಿಗೆ ಸಾರ್ವಜನಿಕರು, ವಿಶೇಷವಾಗಿ ಮಕ್ಕಳು ಪ್ರವೇಶಿಸದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಇಂತಹ ದುರ್ಘಟನೆಗಳು ಮರುಕಳಿಸದಂತೆ ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ವಹಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.






