Chitapur | ‘ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು’ ಸಂದೇಶ ಸಾರಿದ ಮಹಾನ್ ಸಮಾಜ ಸುಧಾರಕ ನಾರಾಯಣ ಗುರು : ಕಾಶಿನಾಥ ಗುತ್ತೇದಾರ
ವಿಶೇಷ ಉಪನ್ಯಾಸ ಕಾರ್ಯಕ್ರಮ

ಚಿತ್ತಾಪುರ: ಮಾನವ ಕುಲಕ್ಕೆ ‘ಒಂದೇ ಜಾತಿ, ಒಂದೇ ಧರ್ಮ ಮತ್ತು ಒಂದೇ ದೇವರು’ ಎಂಬ ಸಂದೇಶ ಸಾರಿದ ಬ್ರಹ್ಮಶ್ರೀ ನಾರಾಯಣ ಗುರು ಮಹಾನ್ ಸಮಾಜ ಸುಧಾರಕರಾಗಿದ್ದು, ಸಮಾನತೆ ಮತ್ತು ಸ್ವಾಭಿಮಾನದ ಹೋರಾಟಕ್ಕೆ ಹೊಸ ದಿಕ್ಕು ತೋರಿದ ಯುಗಪುರುಷರು ಎಂದು ಹಿರಿಯ ಪತ್ರಕರ್ತ ಕಾಶಿನಾಥ ಗುತ್ತೇದಾರ ಹೇಳಿದರು.
ಪಟ್ಟಣದ ರೇವಣಸಿದ್ದಪ್ಪ ಕಾಂತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರ, ಸಾಂಸ್ಕೃತಿಕ ಘಟಕ ಹಾಗೂ ಐಕ್ಯೂಎಸಿ (IQAC) ಸಹಯೋಗದಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯೋತ್ಸವ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇವಾಲಯ ಪ್ರವೇಶಕ್ಕೆ ಅವಕಾಶ ನಿರಾಕರಿಸಲಾಗಿದ್ದ ಸಂದರ್ಭದಲ್ಲಿ ನಾರಾಯಣ ಗುರುಗಳು ತಾವೇ ದೇವಸ್ಥಾನಗಳನ್ನು ನಿರ್ಮಿಸಿ ಎಲ್ಲರಿಗೂ ಪೂಜೆಯ ಹಕ್ಕು ಕಲ್ಪಿಸಿದರು. ಕೇರಳದಲ್ಲಿ ಜಾರಿಯಲ್ಲಿದ್ದ ಅಸ್ಪೃಶ್ಯತೆ, ಮೂಢನಂಬಿಕೆ, ಕಂದಾಚಾರ ಮತ್ತು ಅನಿಷ್ಠ ಪದ್ಧತಿಗಳ ವಿರುದ್ಧ ಮೌನ ಕ್ರಾಂತಿಯ ಮೂಲಕ ಹೋರಾಡಿ ಸಾಮಾಜಿಕ ಪರಿವರ್ತನೆಗೆ ಮುನ್ನುಡಿ ಬರೆದರು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಪದ್ಮಣ್ಣ ರಾಸಣಗಿ ಮಾತನಾಡಿ, ನಾರಾಯಣ ಗುರುಗಳು ಭಾರತದ ಶ್ರೇಷ್ಠ ಸಮಾಜ ಸುಧಾರಕರಲ್ಲಿ ಒಬ್ಬರು. ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆಯ ವಿರುದ್ಧ ಹೋರಾಡಿದ ಅವರು, ಸರ್ವರಿಗೂ ಸಮಾನತೆ, ಸ್ವಾಭಿಮಾನ ಮತ್ತು ಮಾನವೀಯತೆಯ ಸಂದೇಶ ಸಾರಿದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರೋಹಿಣಿ ಕಲ್ಮಠ, ಡಾ.ಜ್ಯೋತಿ ಕುಲಕರ್ಣಿ, ಡಾ.ವಿಲಾಸ್, ಡಾ.ನಾಗವೇಣಿ, ಭಾಗ್ಯಶ್ರೀ ಠಾಕೂರ್ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಘಟಕದ ಸಂಚಾಲಕ ಮಲ್ಲಪ್ಪ ಎಸ್.ತೊಟ್ನಳ್ಳಿ ಸ್ವಾಗತಿಸಿದರು. ಡಾ.ಸೂಗೂರೇಶ್ವರ ಪ್ರಾರ್ಥಿಸಿದರು, ಮರಿಯಪ್ಪ ಮೇತ್ರಿ ಕಾರ್ಯಕ್ರಮ ನಿರೂಪಿಸಿದರು ಹಾಗೂ ಶರಣಪ್ಪ ದಿಗ್ಗಾಂವ ವಂದಿಸಿದರು.






