Chitapur | ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ ಬಾಲ್ಯವಿವಾಹ ತಡೆ ಸಾಧ್ಯ: ಆರತಿ ತುಪ್ಪದ್

ಚಿತ್ತಾಪುರ: ಹೆಣ್ಣುಮಕ್ಕಳಿಗೆ ತಾರತಮ್ಯ ಮಾಡದೆ ಉತ್ತಮ ಶಿಕ್ಷಣ ನೀಡುವುದರಿಂದ ಬಾಲ್ಯವಿವಾಹವನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಆರತಿ ತುಪ್ಪದ್ ಹೇಳಿದರು.
ತಾಲೂಕಿನ ದಂಡೋತಿ ಗ್ರಾಮದ ಅಂಗನವಾಡಿ ಕೇಂದ್ರ-3ರಲ್ಲಿ ಬೇಟಿ ಬಚಾವೋ, ಬೇಟಿ ಪಢಾವೋ ಆಂದೋಲನದ ಅಂಗವಾಗಿ ಆಯೋಜಿಸಿದ್ದ ಒಂದು ದಿನದ ಅರಿವು ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಗಂಡು-ಹೆಣ್ಣು ಎಂಬ ತಾರತಮ್ಯದಿಂದ ಹೆಣ್ಣು ಮಕ್ಕಳಿಗೆ ಸಮರ್ಪಕ ಶಿಕ್ಷಣ ದೊರೆಯದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಬಾಲ್ಯದಲ್ಲೇ ವಿವಾಹ ಮಾಡಿಸುವುದರಿಂದ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದರ ಜೊತೆಗೆ, ಹೆರಿಗೆ ಸಂದರ್ಭದಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.
ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಹೆಣ್ಣು ಮಗುವನ್ನು ಭಾರವೆಂದು ಭಾವಿಸಿ ಬಾಲ್ಯವಿವಾಹಕ್ಕೆ ಮುಂದಾಗುವುದು ಕಂಡುಬರುತ್ತಿದೆ. ಇಂತಹ ಮನೋಭಾವದಿಂದ ಸಾರ್ವಜನಿಕರು ಹೊರಬಂದು ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಶಿಕ್ಷಣ ಪಡೆದ ಹೆಣ್ಣು ಮಕ್ಕಳು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಇದೇ ವೇಳೆ ಲಿಂಗ ತಾರತಮ್ಯ, ವರದಕ್ಷಿಣೆ ನಿಷೇಧ ಕಾಯ್ದೆ, ಹೆಣ್ಣು ಮಗುವಿನ ರಕ್ಷಣೆ ಹಾಗೂ ಸುಕನ್ಯಾ ಸಮೃದ್ಧಿ ಯೋಜನೆಯ ಸೌಲಭ್ಯಗಳ ಕುರಿತು ಸಾರ್ವಜನಿಕರು ಮತ್ತು ಪೋಷಕರಿಗೆ ಮಾಹಿತಿ ನೀಡಲಾಯಿತು.
ದಂಡೋತಿ ವಲಯ ಮೇಲ್ವಿಚಾರಕಿ ಶೋಭಾ ಕೇಶಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಗನವಾಡಿ ಶಿಕ್ಷಕಿ ಸರಸ್ವತಿ ಹಾದಿಮನಿ ಪ್ರಾರ್ಥನಾ ಗೀತೆ ಹಾಡಿದರು. ಅಂಗನವಾಡಿ ಕೇಂದ್ರ-5ರ ಶಿಕ್ಷಕಿ ವಿದ್ಯಾನಿಧಿ ಕವಡೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೇಣುಕಾ ಕಲಾಲ್, ಗ್ರಾಮದ ಮುಖಂಡರಾದ ದಾವೂದ್ ಪಟೇಲ್, ರಶೀದ್ ಪಠಾಣ್, ಶರಣ ಬಸವೇಶ್ವರ ಶಾಲೆಯ ಮುಖ್ಯೋಪಾದ್ಯಾಯ ಮಲ್ಲಣ್ಣ, ಉರ್ದು ಶಾಲೆಯ ಸಹ ಶಿಕ್ಷಕಿ ಸಭಾ, ಅಂಗನವಾಡಿ ಶಿಕ್ಷಕಿಯರಾದ ಅಕ್ಕಮಹಾದೇವಿ ಭೃಂಗಿಮಠ, ಸುಮಲತಾ ಬಟಿಗೇರಿ, ರಾಧಾ, ರೇಖಾ, ಬಸ್ಸಮ್ಮ, ಆಲಿಯಾ ಬೇಗಂ ಸೇರಿದಂತೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರು ಇದ್ದರು.






