Chitapur | ಎಸ್‌ಐಆರ್ ಪ್ರಕ್ರಿಯೆ ಯಶಸ್ಸಿಗೆ ಬಿಎಲ್‌ಎಗಳ ಸಹಕಾರ ಅಗತ್ಯ: ತಹಶೀಲ್ದಾರ್ ನಾಗಯ್ಯ ಹಿರೇಮಠ

ಚಿತ್ತಾಪುರ: ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಯಶಸ್ವಿಯಾಗಿ ಹಾಗೂ ಪಾರದರ್ಶಕವಾಗಿ ನಡೆಯಲು ರಾಜಕೀಯ ಪಕ್ಷಗಳ ಬೂತ್ ಲೆವೆಲ್ ಏಜೆಂಟ್‌ಗಳ (ಬಿಎಲ್‌ಎ) ಸಹಕಾರ ಅತ್ಯಗತ್ಯ ಎಂದು ತಹಶೀಲ್ದಾರ್ ನಾಗಯ್ಯ ಹಿರೇಮಠ ಹೇಳಿದರು.
ಪಟ್ಟಣದ ಸರ್ಕಾರಿ ಕನ್ಯಾ ಪ್ರೌಢಶಾಲೆಯಲ್ಲಿ ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ ಎಸ್‌ಐಆರ್ ಕುರಿತ ಬಿಎಲ್‌ಎ ಏಜೆಂಟರ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುವಂತೆ ನೋಡಿಕೊಳ್ಳುವುದು ಬಿಎಲ್‌ಎಗಳ ಪ್ರಮುಖ ಜವಾಬ್ದಾರಿಯಾಗಿದೆ. ಯಾವುದೇ ಗೊಂದಲಗಳಿಗೆ ಅವಕಾಶ ನೀಡದಂತೆ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಸೂಚಿಸಿದರು.
ಚುನಾವಣಾ ಆಯೋಗದ ನಿರ್ದೇಶನದಂತೆ ಜೂನ್ 30ರಿಂದ ಜುಲೈ 29ರವರೆಗೆ ಬಿಎಲ್‌ಒಗಳು ಮನೆ-ಮನೆಗೆ ಭೇಟಿ ನೀಡಿ ಮತದಾರರಿಗೆ ಎನ್ಯುಮರೇಷನ್ ಫಾರ್ಮ್‌ಗಳನ್ನು ವಿತರಿಸಿ, ಭರ್ತಿ ಮಾಡಿದ ನಮೂನೆಗಳನ್ನು ಸಂಗ್ರಹಿಸಲಿದ್ದಾರೆ ಎಂದು ತಿಳಿಸಿದರು.
ಚುನಾವಣಾ ಪ್ರಕ್ರಿಯೆಯಲ್ಲಿ ಬಿಎಲ್‌ಎಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮತದಾರರ ಪಟ್ಟಿಯ ವಿತರಣೆ, ಅರ್ಜಿಗಳ ಸಂಗ್ರಹಣೆ ಹಾಗೂ ಡಿಜಿಟಲೀಕರಣದ ಸಂದರ್ಭದಲ್ಲಿ ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಮತದಾರರಿಗೆ ಅಗತ್ಯ ಸಹಾಯ ಒದಗಿಸಬೇಕು. ಆದರೆ ಯಾವುದೇ ಸೌಲಭ್ಯ ನೀಡುವ ನೆಪದಲ್ಲಿ ಬಿಎಲ್‌ಒಗಳಿಗೆ ಷರತ್ತು ವಿಧಿಸಬಾರದು ಎಂದು ಅವರು ಎಚ್ಚರಿಸಿದರು.
ಮತದಾರರ ಪಟ್ಟಿಯಲ್ಲಿ ಯಾವುದೇ ದೋಷಗಳು ಇರದಂತೆ ಬಿಎಲ್‌ಎಗಳು ತಮ್ಮ ವ್ಯಾಪ್ತಿಯ ಪ್ರತಿಯೊಂದು ಮನೆಗೆ ಭೇಟಿ ನೀಡಿ, ಅರ್ಹ ಮತದಾರರ ಹೆಸರು ಸೇರ್ಪಡೆ ಹಾಗೂ ಅನರ್ಹರ ಹೆಸರು ಕೈಬಿಡುವ ಪ್ರಕ್ರಿಯೆಯಲ್ಲಿ ಸಹಕರಿಸಬೇಕು. ಮತದಾರರ ಪಟ್ಟಿಯ ಶುದ್ಧೀಕರಣವು ನಿರಂತರ ಪ್ರಕ್ರಿಯೆಯಾಗಿದ್ದು, ಬಿಎಲ್‌ಎಗಳ ಜವಾಬ್ದಾರಿ ಬಹಳ ಮಹತ್ವದ್ದಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಗ್ರೇಡ್ 2 ತಹಶೀಲ್ದಾರ್ ರಾಜಕುಮಾರ್ ಮರತೂರಕರ್, ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ, ವಾಡಿ ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ್ ಹಾಗೂ ತಾಲೂಕು ಪಂಚಾಯತ್ ಎಡಿ ಪಂಡಿತ್ ಸಿಂಧೆ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಅಪೇಕ್ಸ್ ಬ್ಯಾಂಕ್ ನಿರ್ದೇಶಕ ಸುನೀಲ್ ದೊಡ್ಡಮನಿ, ವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಮೂದ್ ಸಾಹೇಬ್, ಮುಕ್ತಾರ್ ಪಟೇಲ್, ಶೀಲಾ ಕಾಶಿ, ಮಲ್ಲಿಕಾರ್ಜುನ ಕಾಳಗಿ, ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಬಿಎಲ್‌ಎ-1 (ಬಿಜೆಪಿ) ಬಸವರಾಜ ಬೆಣ್ಣೂರಕರ್, ನಾಗರಾಜ ಭಂಕಲಗಿ, ಸುರೇಶ ರಾಠೋಡ, ಜಾಫರ್ ಸೇಠ್, ನಾಗರಾಜ ಹೂಗಾರ, ಆನಂದ ಪಾಟೀಲ ನರಿಬೋಳ, ಉದಯ ಸಿಂಪಿ, ಶೇಖ ಬಬ್ಬು, ಚಂದ್ರಶೇಖರ ಕಾಶಿ, ಅಯ್ಯಪ್ಪ ರಾಮತೀರ್ಥ, ಮಲ್ಲಿಕಾರ್ಜುನ ಇಟಗಿ, ತಮ್ಮಣ್ಣ ಡಿಗ್ಗಿ, ಮುಜೀಬ್ ಜುನೈದಿ ಸೇರಿದಂತೆ ವಾಡಿ ಮತ್ತು ಚಿತ್ತಾಪುರ ಭಾಗದ ಬಿಎಲ್‌ಎ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಸಂಪನ್ಮೂಲ ವ್ಯಕ್ತಿಗಳಾದ ವಿನೋದ ಗೌಳಿ, ಮಲ್ಲಿಕಾರ್ಜುನ, ಕಾಶಿರಾಯ ಕಲಾಲ್ ಮತ್ತು ಉದಯಕುಮಾರ ಇಂಗಳೆ, ದೇವೇಂದ್ರಪ್ಪ ದೊರೆ, ಬಸ್ಸಪ್ಪ ಯಂಬತ್ನಾಳ ತರಬೇತಿ ನೀಡಿದರು.
ಬಿಎಲ್‌ಎಗಳ ಪ್ರಮುಖ ಜವಾಬ್ದಾರಿಗಳು:
► 18 ವರ್ಷ ಪೂರ್ಣಗೊಳಿಸಿದ ಪ್ರತಿಯೊಬ್ಬ ಅರ್ಹ ಯುವ ಮತದಾರರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲು ಆಸಕ್ತಿ ವಹಿಸುವುದು.
► ಮೃತಪಟ್ಟವರು ಅಥವಾ ಬೇರೆಡೆಗೆ ಸ್ಥಳಾಂತರಗೊಂಡವರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲು ಅಗತ್ಯ ದಾಖಲೆಗಳೊಂದಿಗೆ ಫಾರ್ಮ್-7 ಸಲ್ಲಿಸುವುದು.
► ಹೆಸರು, ವಿಳಾಸ ಅಥವಾ ಜನ್ಮ ದಿನಾಂಕದಲ್ಲಿನ ತಪ್ಪುಗಳನ್ನು ಸರಿಪಡಿಸಲು ಫಾರ್ಮ್-8 ಬಳಕೆಯ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವುದು.
► ಮತಗಟ್ಟೆ ಮಟ್ಟದ ಅಧಿಕಾರಿಗಳೊಂದಿಗೆ (ಬಿಎಲ್‌ಒ) ಸಮನ್ವಯ ಸಾಧಿಸಿ ಮನೆ-ಮನೆಗೆ ಭೇಟಿ ವೇಳೆ ಅಗತ್ಯ ಮಾಹಿತಿ ಹಾಗೂ ಸಹಕಾರ ನೀಡುವುದು.






