Chitapur | ಕೊಳೆಗೇರಿ ಬಡಾವಣೆಗಳಿಗೆ ಮೂಲಸೌಕರ್ಯ ಕಲ್ಪಿಸಲು ಆಗ್ರಹ

ಚಿತ್ತಾಪುರ : ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಿಸಿರುವ ಮನೆಗಳಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಸೂಕ್ತ ಮೂಲಸೌಕರ್ಯ ಕಲ್ಪಿಸಬೇಕು ಎಂದು ಕೊಳೆಗೇರಿ ಅಭಿವೃದ್ಧಿ ಮಂಡಳಿ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ಲಕ್ಷ್ಮೀಕಾಂತ ತಾಂಡೂರಕರ್ ಆಗ್ರಹಿಸಿದರು.
ದಿಗ್ಗಾಂವ್ ಹಾಗೂ ಸಾತನೂರ ರಸ್ತೆಯಲ್ಲಿರುವ ಕೊಳೆಗೇರಿ ಬಡಾವಣೆ ನಿವಾಸಿಗಳಿಗೆ ಮೂಲಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಪುರಸಭೆ ವ್ಯವಸ್ಥಾಪಕರಿಗೆ ಮನವಿಪತ್ರ ಸಲ್ಲಿಸಿದ ಅವರು, ಅಗತ್ಯ ಸೌಲಭ್ಯಗಳಿಲ್ಲದೆ ನಿವಾಸಿಗಳು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ತಿಳಿಸಿದರು.
ಬಡಾವಣೆಯಲ್ಲಿ ಬೀದಿದೀಪಗಳನ್ನು ಅಳವಡಿಸಬೇಕು. ನಿತ್ಯ ಕಸ ವಿಲೇವಾರಿ ಮಾಡಬೇಕು. ಪ್ರತಿ ಬ್ಲಾಕ್‌ನಲ್ಲಿ ಕಸ ಶೇಖರಣೆಗೆ ಡಬ್ಬಿಗಳ ವ್ಯವಸ್ಥೆ ಮಾಡಬೇಕು. ಪ್ರತಿದಿನ ನೀರು ಸರಬರಾಜು ಮಾಡಲು ಪಂಪ್ ಆಪರೇಟರ್ ನೇಮಿಸಬೇಕು. ಒಡೆದಿರುವ ಕುಡಿಯುವ ನೀರಿನ ಪೈಪ್‌ಗಳನ್ನು ಕೂಡಲೇ ದುರಸ್ತಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕೃಷ್ಣ ಭೋವಿ, ತಿಮ್ಮು ತಾಂಡೂರಕರ್, ಶಂಭು ಭೋವಿ, ಅಂಬು ಚವ್ಹಾಣ್, ರಾಜು ಗುತ್ತೇದಾರ್, ಸುನೀಲ್ ಪವಾರ್, ದೀಲಿಪ್ ಕಟಗೆ, ಪರಶುರಾಮ ರಾಜಾಪೂರ, ಚಿದಾನಂದ ಕಾಶಿ, ನಾಗು ಹೋಳಿಕಟ್ಟಿ, ಸೂರ್ಯಕಾಂತ, ರಾಜು ಭಜಂತ್ರಿ, ಸಂತೋಷ ಭಂಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.






