ಚಿತ್ತಾಪುರ | ಬಂಗಾರ, ಬೈಕ್ ಕಳ್ಳತನ : ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಚಿತ್ತಾಪುರ : ಪಟ್ಟಣದ ವೆಂಕಟೇಶ್ವರ ಕಾಲೋನಿಯಲ್ಲಿ ಡಿಸೆಂಬರ್ 30ರ ರಾತ್ರಿ ಸುಮಾರು 3 ಗಂಟೆ ಸುಮಾರಿಗೆ ಮನೆ ಕಳ್ಳತನ ನಡೆದಿರುವ ಘಟನೆ ಸಂಭವಿಸಿದ್ದು, ಕಳ್ಳತನದ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ.
ವೆಂಕಟೇಶ್ವರ ಕಾಲೋನಿಯ ನಿವಾಸಿ ರಮೇಶ ಶರಣಪ್ಪ ಬೋವಿ ಅವರ ಮನೆಯಲ್ಲಿ ಇರಿಸಿದ್ದ 1 ತೊಲೆ ಬಂಗಾರ, 16 ತೊಲೆ ಬೆಳ್ಳಿ ಹಾಗೂ 1,500 ರೂ. ನಗದು ಹಣವನ್ನು ಕಳ್ಳರು ಅಪಹರಿಸಿರುವುದು ತಿಳಿದುಬಂದಿದೆ. ಇದೇ ವೇಳೆ ಸುರೇಶ ಲಕ್ಷ್ಮಣ ಸರಾಫ್ ಅವರ ಮನೆಯ ಬಾಗಿಲಿನ ಕೀಲಿ ಮುರಿದು ಕಳ್ಳತನಕ್ಕೆ ಯತ್ನಿಸಿರುವ ಘಟನೆ ನಡೆದಿದೆ.
ಅಲ್ಲದೆ, ಪಟ್ಟಣದ ಜಗನ್ನಾಥ ಚಂದಯ್ಯ ಗುತ್ತೇದಾರ ಅವರ ಮನೆಯ ಮುಂದೆ ನಿಲ್ಲಿಸಿದ್ದ ಪಲ್ಸರ್ ಬೈಕ್ ಕೂಡ ಕಳ್ಳತನವಾಗಿರುವುದಾಗಿ ವರದಿಯಾಗಿದೆ.
ಸುದ್ದಿ ತಿಳಿದ ತಕ್ಷಣ ಡಿವೈಎಸ್ಪಿ ಶಂಕರಗೌಡ ಪಾಟೀಲ, ಪಿಎಸ್ಐ ಮಂಜುನಾಥ ರೆಡ್ಡಿ, ಸಿದ್ದು ಮಡಿವಾಳ, ಅನೀಲ್ ಕುಮಾರ, ರವಿಕುಮಾರ, ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳದ ಸಿಬ್ಬಂದಿ ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಕುರಿತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







