Chitapur | ಅ.11ರಿಂದ ನಾಗಾವಿ ಯಲ್ಲಮ್ಮ ದೇವಿ ನವರಾತ್ರಿ ಉತ್ಸವ: ಅ.26ರಂದು ಪಲ್ಲಕ್ಕಿ ಉತ್ಸವ

ಚಿತ್ತಾಪುರ: ದೇಶದ ಪ್ರಮುಖ ಶಕ್ತಿಪೀಠಗಳಲ್ಲೊಂದಾದ, ರಾಷ್ಟ್ರಕೂಟ ಸಾಮ್ರಾಜ್ಯದ ಕುಲದೇವತೆಯಾಗಿ ಹಾಗೂ ಕನ್ನಡ ನಾಡಿನ ಇತಿಹಾಸ ಪ್ರಸಿದ್ಧ ವಿಶ್ವವಿದ್ಯಾಲಯ ಮತ್ತು ಘಟಿಕಸ್ಥಳವಾಗಿದ್ದ ನಾಗಾವಿಯ ಇಷ್ಟದೇವತೆ ಶ್ರೀ ನಾಗಾವಿ ಯಲ್ಲಮ್ಮ ದೇವಿಯ ನವರಾತ್ರಿ ಉತ್ಸವ ಅ.11ರಿಂದ ಆರಂಭವಾಗಲಿದ್ದು, ಅ.26ರಂದು ಪಲ್ಲಕ್ಕಿ ಉತ್ಸವ ನಡೆಯಲಿದೆ ಎಂದು ತಹಶೀಲ್ದಾರ್ ನಾಗಯ್ಯ ಹಿರೇಮಠ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಗಾವಿ ಯಲ್ಲಮ್ಮ ದೇವಸ್ಥಾನದಲ್ಲಿ ಅ.11ರಂದು ಬೆಳಿಗ್ಗೆ 6 ಗಂಟೆಗೆ ಅಭಿಷೇಕ, ಘಟಸ್ಥಾಪನೆ ಹಾಗೂ ಮಹಾಮಂಗಳಾರತಿ ನಡೆಯಲಿದೆ. ಅ.19ರವರೆಗೆ ಪ್ರತಿದಿನ ರಾತ್ರಿ 8ರಿಂದ 9 ಗಂಟೆಯವರೆಗೆ ಶ್ರೀದೇವಿಯ ಸಹಸ್ರನಾಮ ಕುಂಕುಮಾರ್ಚನೆ, ಮಂತ್ರಪುಷ್ಪ ಸೇವೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ ಎಂದು ತಿಳಿಸಿದರು.
ಅ.18ರಂದು ದುರ್ಗಾಷ್ಟಮಿ ನಿಮಿತ್ತ ವಿಶೇಷ ಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ಅ.20ರಂದು ಸಂಜೆ 4.30ಕ್ಕೆ ವಿಜಯದಶಮಿ ಅಂಗವಾಗಿ ತಹಶೀಲ್ದಾರ್ ನಾಗಯ್ಯ ಹಿರೇಮಠ ಹಾಗೂ ರತ್ನಾಕರ ನಾಯಕ ಅವರಿಂದ ಬನ್ನಿ ಪೂಜೆ ನೆರವೇರಲಿದೆ ಎಂದು ಹೇಳಿದರು.
ಪಟ್ಟಣದ ದಿವಂಗತ ಶ್ರೀ ಲಚ್ಚಪ್ಪ ಮಲ್ಹಾರ್ ನಾಯಕ (ಸರಾಫ್) ಅವರ ನಿವಾಸದಲ್ಲಿ ಮಧ್ಯಾಹ್ನ 1.30ಕ್ಕೆ ಶ್ರೀ ವಿಘ್ನೇಶ್ವರ ಪೂಜೆ, ಶ್ರೀ ಗುರು ಪೂಜೆ, ಶ್ರೀದೇವಿ ಪಾದುಕಾ ಪೂಜೆ ಹಾಗೂ ಶ್ರೀದೇವಿಯ ಪಲ್ಲಕ್ಕಿ ಪೂಜೆ ನಡೆಯಲಿದೆ. ಮಧ್ಯಾಹ್ನ 2ರಿಂದ ಸಂಜೆ 7ರವರೆಗೆ ಪಲ್ಲಕ್ಕಿ ಉತ್ಸವ ನಡೆಯಲಿದ್ದು, ದೇವಸ್ಥಾನ ತಲುಪಿದ ಬಳಿಕ ದೇವಾಲಯದ ಗರ್ಭಗುಡಿಗೆ ಐದು ಪ್ರದಕ್ಷಿಣೆ ಹಾಕಲಾಗುವುದು. ಬಳಿಕ ದೇವಿಯ ಮಂಗಳಾರತಿ ಹಾಗೂ ಆಶೀರ್ವಾದದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದರು.
ಭಕ್ತಾಧಿಗಳು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀದೇವಿಯ ಆಶೀರ್ವಾದಕ್ಕೆ ಪಾತ್ರರಾಗಬೇಕು ಎಂದು ಅವರು ಕೋರಿದ್ದಾರೆ. ದೇವಸ್ಥಾನಕ್ಕೆ ಯಾವುದೇ ರೀತಿಯ ಕಾಣಿಕೆ ಸಲ್ಲಿಸುವುದಾದರೆ ದೇವಸ್ಥಾನದ ಅಧ್ಯಕ್ಷರ ಹೆಸರಿನಲ್ಲಿ ನೀಡಬೇಕು ಹಾಗೂ ಕಡ್ಡಾಯವಾಗಿ ರಸೀದಿ ಪಡೆಯಬೇಕು ಎಂದು ತಿಳಿಸಿದ್ದಾರೆ.






