Chitapur | ನಾಗಾವಿ ಯಲ್ಲಮ್ಮ ದೇವಿ ಪಲ್ಲಕ್ಕಿ ಉತ್ಸವ : ನಿಗದಿತ ಸ್ಥಳಗಳಲ್ಲಿ ವಾಹನ ನಿಲುಗಡೆಗೆ ಸೂಚನೆ

ಚಿತ್ತಾಪುರ: ಪಟ್ಟಣದ ಐತಿಹಾಸಿಕ ಶ್ರೀ ನಾಗಾವಿ ಯಲ್ಲಮ್ಮ ದೇವಿಯ ಪಲ್ಲಕ್ಕಿ ಉತ್ಸವ ಅ.26ರಂದು ನಡೆಯಲಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರ ಸುರಕ್ಷತೆ, ಸುಗಮ ಸಂಚಾರ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪೊಲೀಸ್ ಇಲಾಖೆ ನಿಗದಿಪಡಿಸಿರುವ ನಿಯಮಗಳನ್ನು ಸಮಸ್ತ ಭಕ್ತಾದಿಗಳು ಪಾಲಿಸಬೇಕು ಎಂದು ಪಿಎಸ್ಐ ಮಂಜುನಾಥ ರೆಡ್ಡಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಚಿತ್ತಾಪುರ ಪಟ್ಟಣದಿಂದ ಬರುವ ದ್ವಿಚಕ್ರ ವಾಹನಗಳನ್ನು ಡಾ. ಪ್ರಭುರಾಜ್ ಕಾಂತಾ ಅವರ ಹೊಲದಲ್ಲಿ ನಿಲುಗಡೆ ಮಾಡಬೇಕು. ಪಟ್ಟಣದಿಂದ ಬರುವ ಆಟೋ, ಕಾರು ಹಾಗೂ ಇತರ ವಾಹನಗಳನ್ನು ಅಂಬದಾಸ ತುರೆ ಅವರ ಹೊಲದಲ್ಲಿ ನಿಲುಗಡೆ ಮಾಡಬೇಕು ಎಂದು ಸೂಚಿಸಿದ್ದಾರೆ.
ಕರದಾಳ ಮತ್ತು ಸಾತನೂರು ಕಡೆಯಿಂದ ಬರುವ ವಾಹನಗಳನ್ನು ನಾಗಾವಿ ಎಜುಕೇಶನ್ ಹಬ್, ಸಂಜೀವಿನಿ ಆಂಜನೇಯ ದೇವಸ್ಥಾನ ಹಾಗೂ ಪ್ರವಾಸಿ ಮಂದಿರದ ಸಮೀಪ ನಿಗದಿಪಡಿಸಿರುವ ಸ್ಥಳಗಳಲ್ಲಿ ನಿಲುಗಡೆ ಮಾಡಬೇಕು ಎಂದು ತಿಳಿಸಿದ್ದಾರೆ.
ಭಕ್ತಾದಿಗಳು ತಮ್ಮ ವಾಹನಗಳನ್ನು ಕಡ್ಡಾಯವಾಗಿ ನಿಗದಿಪಡಿಸಿದ ಪಾರ್ಕಿಂಗ್ ಸ್ಥಳಗಳಲ್ಲಿಯೇ ನಿಲ್ಲಿಸಬೇಕು. ದೇವಸ್ಥಾನದ ಮುಂಭಾಗದ ರಸ್ತೆ ಬದಿಗಳಲ್ಲಿ ಹಾಗೂ ಖಾಲಿ ಜಾಗಗಳಲ್ಲಿ ವಾಹನ ನಿಲುಗಡೆ ಮಾಡಬಾರದು. ನಿಗದಿತ ಸ್ಥಳಗಳನ್ನು ಹೊರತುಪಡಿಸಿ ಬೇರೆಡೆ ವಾಹನ ನಿಲುಗಡೆ ಮಾಡಿದರೆ ದಂಡ ವಿಧಿಸುವುದರ ಜೊತೆಗೆ ನಿಯಮಾನುಸಾರ ವಾಹನ ಜಪ್ತಿ ಮಾಡುವ ಕ್ರಮ ಕೈಗೊಳ್ಳಲಾಗುವುದು ಎಂದು ಪಿಎಸ್ಐ ಮಂಜುನಾಥ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.






