Chitapur | ನಾಗಾವಿಯ ಐತಿಹಾಸಿಕ, ಸಾಂಸ್ಕೃತಿಕ ಮಹತ್ವ ದಾಖಲಿಸುವ ಅಗತ್ಯವಿದೆ: ಮಲ್ಲಿಕಾರ್ಜುನ ಬಾಗೋಡಿ

ಚಿತ್ತಾಪುರ: ಕರ್ನಾಟಕದ ಪ್ರಾಚೀನ ಅಗ್ರಹಾರಗಳಲ್ಲಿ ಪ್ರಮುಖ ಸ್ಥಾನ ಪಡೆದಿರುವ ನಾಗಾವಿಯ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಪುರಾತತ್ತ್ವೀಯ ಮಹತ್ವವನ್ನು ಸಮಗ್ರವಾಗಿ ದಾಖಲಿಸುವ ಅಗತ್ಯವಿದೆ ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ದೃಶ್ಯಕಲಾ ಅಧ್ಯಯನ ವಿಭಾಗದ ಉಪನ್ಯಾಸಕ ಮಲ್ಲಿಕಾರ್ಜುನ ಸಿ. ಬಾಗೋಡಿ ಹೇಳಿದರು.
ಚಿತ್ತಾಪುರದ ಆರ್.ಕೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ವತಿಯಿಂದ ಆಯೋಜಿಸಿದ್ದ ‘ನಾಗಾವಿ: ಸಾಂಸ್ಕೃತಿಕ ಮುಖಾಮುಖಿ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಗಾವಿಯ ಪ್ರಾಚೀನತೆ ಹಾಗೂ ವೈಭವವನ್ನು ಶಾಸನಗಳು ಸ್ಪಷ್ಟವಾಗಿ ದಾಖಲಿಸಿವೆ ಎಂದು ತಿಳಿಸಿದರು.
ನಾಗಾವಿಯನ್ನು ಶಾಸನಗಳಲ್ಲಿ ‘ಅಗ್ರಹಾರ ನಾಗವಾವಿ’, ‘ಮಹಾಅಗ್ರಹಾರ ನಾಗವಾವಿ’ ಹಾಗೂ ‘ಸರ್ವನಮಸ್ಯದ ಅಗ್ರಹಾರ ನಾಗವಾವಿ’ ಎಂಬ ವಿವಿಧ ಹೆಸರುಗಳಿಂದ ಉಲ್ಲೇಖಿಸಲಾಗಿದೆ. ಒಂದು ಶಾಸನದಲ್ಲಿ ನಾಗಾವಿಯನ್ನು “ಚತುರ್ವೇದ ಪಾರಾವಾರ ಪಾರಗರಪ್ಪ ನಾಲ್ನೂರು ವಿಪ್ರೋತ್ತಮರಿಂದ ಅಭಿನವ ಬ್ರಹ್ಮಲೋಕವೆಂಬಂತೆ…” ಎಂದು ವರ್ಣಿಸಿರುವುದು ಅದರ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ ಎಂದು ಬಾಗೋಡಿ ಹೇಳಿದರು.
ರಾಷ್ಟ್ರಕೂಟರ ಕಾಲದಲ್ಲಿ ಪ್ರಸಿದ್ಧ ಅಗ್ರಹಾರವಾಗಿದ್ದ ನಾಗಾವಿ, ಚಾಲುಕ್ಯರಸ ಮೊದಲನೇ ಸೋಮೇಶ್ವರನ ಕಾಲದಲ್ಲಿ ಘಟಿಕಾಸ್ಥಾನವಾಗಿ ಬೆಳೆದಿತ್ತು. ಮಧುವಪ್ಪರಸ ದಂಡನಾಯಕ ಇದನ್ನು ನಿರ್ಮಿಸಿದ್ದನೆಂದು ತಿಳಿಸಿದ ಬಾಗೋಡಿ, ಸ್ಥಳೀಯ ವಿಶ್ವವಿದ್ಯಾಲಯದ ಮಟ್ಟದ ವಿದ್ಯಾಕೇಂದ್ರವಾಗಿದ್ದ ನಾಗಾವಿಯ ಘಟಿಕಾಸ್ಥಾನವು ಭಾರತೀಯ ಸಾಂಸ್ಕೃತಿಕ ಇತಿಹಾಸದಲ್ಲಿ ಮಹತ್ವದ ಸ್ಥಾನ ಹೊಂದಿದೆ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪತ್ರಾಗಾರ ಮತ್ತು ಗ್ಯಾಸೆಟಿಯರ್ ಇಲಾಖೆಯ ಉಪನಿರ್ದೇಶಕ ಡಾ. ವೀರಶೆಟ್ಟಿ ಗಾರಂಪಳ್ಳಿ, ನಾಗಾವಿ ಘಟಿಕಾಸ್ಥಾನದಲ್ಲಿ ವೇದ, ಶಾಸ್ತ್ರ, ಯೋಗ ಸೇರಿದಂತೆ ಪ್ರಾಚೀನ ಭಾರತದ ಪ್ರಮುಖ ವಿದ್ಯಾಶಾಖೆಗಳನ್ನು ಬೋಧಿಸಲಾಗುತ್ತಿತ್ತು ಎಂದು ಹೇಳಿದರು.
ಇಲ್ಲಿ ಬೋಧಿಸುತ್ತಿದ್ದ ಉಪಾಧ್ಯಾಯರು ಹಾಗೂ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿತ್ತು ಎಂಬುದನ್ನು ಶಾಸನಗಳು ದಾಖಲಿಸಿವೆ. ನಾಗಾವಿಯ ಫಲವತ್ತಾದ ಭೂಮಿ ಹಾಗೂ ಸಮೃದ್ಧ ನೈಸರ್ಗಿಕ ಸಂಪತ್ತು ಕೂಡ ಅದರ ಬೆಳವಣಿಗೆಗೆ ಪೂರಕವಾಗಿದ್ದವು ಎಂದು ಅವರು ವಿವರಿಸಿದರು.
ನಾಗಾವಿಯ ಲಕ್ಷಣೇಶ್ವರ ದೇವಾಲಯದ ಗೋಡೆಯಲ್ಲಿರುವ ಕ್ರಿ.ಶ. 1092ರ ಗದ್ಯಶಾಸನವು ಇಲ್ಲಿನ ಸಾಮಾಜಿಕ, ಆರ್ಥಿಕ ಹಾಗೂ ಧಾರ್ಮಿಕ ಜೀವನದ ಕುರಿತು ಮಹತ್ವದ ಮಾಹಿತಿ ನೀಡುತ್ತದೆ. ನಾಗಾವಿ ಸಂತೆಯಲ್ಲಿ ಮಾರಾಟವಾಗುತ್ತಿದ್ದ ವಸ್ತುಗಳ ಬೆಲೆಯ ಹದಿನಾರನೇ ಒಂದು ಭಾಗವನ್ನು ದೇವಾಲಯಗಳ ಜೀರ್ಣೋದ್ಧಾರಕ್ಕೆ ನೀಡಲು ವರ್ತಕರು ನಿರ್ಧರಿಸಿದ್ದರು. ಈ ಆದಾಯ-ವೆಚ್ಚದ ಉಸ್ತುವಾರಿ ನೋಡಿಕೊಳ್ಳಲು ಸಂಭಾವಿತರಪ್ಪ ಶೆಟ್ಟಿಯವರ ನೇತೃತ್ವದಲ್ಲಿ ಧರ್ಮದರ್ಶಿ ಸಮಿತಿಯನ್ನು ರಚಿಸಲಾಗಿತ್ತು ಎಂಬುದನ್ನು ಶಾಸನ ತಿಳಿಸುತ್ತದೆ.
ನಾಗಾವಿ ಪರಿಸರದಲ್ಲಿ ತ್ರೈಪುರುಷ ದೇವಾಲಯ, ಮಧುಸೂಧನಾಲಯ, ಜೈನ ಬಸದಿ, ರಾಮೇಶ್ವರ ದೇವಾಲಯ, ಲಕ್ಷ್ಮಣೇಶ್ವರ ದೇವಾಲಯ, ಸಿದ್ದೇಶ್ವರ ದೇವಾಲಯ, ಈರಪ್ಪಯ್ಯನ ಗದ್ದುಗೆ, ನಾಟ್ಯಶಾಲೆ, ಆಂಜನೇಯ ದೇವಾಲಯ ಹಾಗೂ ನಾಗವೇಲಾಂಬಿಕಾ ದೇವಸ್ಥಾನ ಸೇರಿದಂತೆ ಹಲವು ಐತಿಹಾಸಿಕ ಸ್ಮಾರಕಗಳಿವೆ.
ಸಕಲ ಮತಧರ್ಮಗಳ ಕೇಂದ್ರವಾಗಿದ್ದ ನಾಗಾವಿಯನ್ನು ‘ದಕ್ಷಿಣದ ಕಾಶಿ’ ಎಂದು ಕರೆಯಲಾಗುತ್ತಿತ್ತು. ರಾಮೇಶ್ವರ ದೇವಾಲಯದಲ್ಲಿ ಪುರಾಣ ಪ್ರವಚನಗಳು ನಡೆಯುತ್ತಿದ್ದರೆ, ಸಿದ್ದೇಶ್ವರ ಮಠದಲ್ಲಿ ಯೋಗಿ ಸನ್ಯಾಸಿಗಳು ವಾಸಿಸಿ ಜನರಿಗೆ ಯೋಗಾಭ್ಯಾಸ ಕಲಿಸುತ್ತಿದ್ದರು. ಈ ಕಾರಣದಿಂದ ನಾಗಾವಿಯನ್ನು ‘ದಕ್ಷಿಣದ ತಕ್ಷಶಿಲಾ’ ಎಂದೂ ಕರೆಯಲಾಗುತ್ತಿತ್ತು ಎಂದು ಡಾ. ಗಾರಂಪಳ್ಳಿ ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಪದ್ಮಣ್ಣ ರಾಸಣಗಿ, ಭೀಮಣ್ಣ ಸಾಲಿ, ಡಾ. ನಾಗವೇಣಿ, ಮಲ್ಲಿಕಾರ್ಜುನ ಬಿರಾದಾರ, ಕೈಲಾಸಪತಿ ವಿಶ್ವಕರ್ಮ, ಶ್ರೀಕಾಂತ ಓಮಣ್ಣ, ಮಹಾದೇವ ಶಾಸ್ತ್ರಿ, ಶ್ರೀನಾಥ, ಶರಣಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.






