Chitapur | ಮುಖ್ಯ ರಸ್ತೆಗಳಲ್ಲಿ ಗುಂಡಿಗಳದ್ದೇ ದರ್ಬಾರ್ ; ಸಾರ್ವಜನಿಕರ ಆಕ್ರೋಶ

ಚಿತ್ತಾಪುರ: ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಗುಂಡಿಗಳು ಉಂಟಾಗಿದ್ದು, ಅವುಗಳನ್ನು ಮುಚ್ಚುವವರೇ ಇಲ್ಲದಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಆಸರ್ ಮೊಹಲ್ಲಾದ ಪ್ರಮುಖ ರಸ್ತೆಯಲ್ಲಿ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು, ಇದೇ ಮಾರ್ಗದ ಮೂಲಕ ತರಕಾರಿ ಮಾರುಕಟ್ಟೆ, ಚಿತ್ತಾವಲಿ ದೇವಸ್ಥಾನ, ನಾಗಾವಿ ದೇವಸ್ಥಾನ, ಜನತಾ ವೃತ್ತ ಹಾಗೂ ಬಸ್ ನಿಲ್ದಾಣಕ್ಕೆ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಆದರೆ ಹಲವು ತಿಂಗಳುಗಳಿಂದ ಗುಂಡಿಗಳು ಹಾಗೆಯೇ ಉಳಿದಿದ್ದರೂ ದುರಸ್ತಿ ಕಾರ್ಯ ಕೈಗೊಳ್ಳದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ರಸ್ತೆಯ ಮಧ್ಯಭಾಗದಲ್ಲೇ ಅಪಾಯಕಾರಿಯಾಗಿ ಬಾಯಿ ತೆರೆದಿರುವ ಗುಂಡಿಗಳಿಂದ ವಾಹನ ಸವಾರರು, ಪಾದಚಾರಿಗಳು, ಮಕ್ಕಳು ಹಾಗೂ ವೃದ್ಧರು ತೊಂದರೆ ಅನುಭವಿಸುತ್ತಿದ್ದಾರೆ. ಕೆಲವರು ಗುಂಡಿಗಳಿಗೆ ಬಿದ್ದು ಗಾಯಗೊಂಡ ಘಟನೆಗಳೂ ನಡೆದಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಕುರಿತು ಹಲವು ಬಾರಿ ಸಂಬಂಧಿತ ಪುರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
“ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅಪಾಯಕಾರಿಯಾಗಿ ಗುಂಡಿಗಳು ಉಂಟಾಗಿದ್ದು, ಜನರು ಜೀವ ಭಯದಲ್ಲೇ ಸಂಚರಿಸುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಗುಂಡಿಗಳನ್ನು ಮುಚ್ಚಿ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳಬೇಕು” ಎಂದು ಸ್ಥಳೀಯ ನಿವಾಸಿ ಮುಹಮ್ಮದ್ ಹುಸೇನ್ ಒತ್ತಾಯಿಸಿದ್ದಾರೆ.






