ಚಿತ್ತಾಪುರ: ಪಟ್ಟಣಕ್ಕೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಆಗ್ರಹ

ಚಿತ್ತಾಪುರ: ಪಟ್ಟಣದ ಪುರಸಭೆ ವ್ಯಾಪ್ತಿಯ 23 ವಾರ್ಡಗಳಿಗೆ ದಿನನಿತ್ಯ ಶುದ್ಧವಾದ ಕುಡಿಯುವ ನೀರು ಸರಬರಾಜು ಮಾಡಬೇಕು ಎಂದು ಹೊಂಗೀರಣ ತಾಲೂಕು ಹಿರಿಯ ನಾಗರಿಕರ ಹಾಗೂ ವಯೋವೃದ್ಧರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಹ್ಮದ್ ಇಬ್ರಾಹಿಂ ಆಗ್ರಹಿಸಿದರು.
ಜಿಲ್ಲಾಧಿಕಾರಿಗೆ ಬೆರದ ಮನವಿ ಪತ್ರವನ್ನು ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ಸಲ್ಲಿಸಿ ಮಾತನಾಡಿದ ಅವರು, ಚಿತ್ತಾಪುರ ಪಟ್ಟಣಕ್ಕೆ ಕಳೆದ ವರ್ಷದಿಂದ ಶುದ್ಧವಾದ ಕುಡಿಯುವ ನೀರು ಸಮರ್ಪಕವಾಗಿ ಸರಬರಾಜು ಆಗುತ್ತಿಲ್ಲ ಹಾಗೂ ದಿನ ಬಿಟ್ಟು ದಿನ ನೀರು ಬಿಡಲಾಗುತ್ತಿದೆ.ಸಮಯಕ್ಕೆ ಸರಿಯಾಗಿ ನೀರು ಬೀಡದೆ ತಮ್ಮ ಮನಸ್ಸಿಗೆ ಬಂದಂತೆ ಬಿಡುತ್ತಾರೆ ಇದರಿಂದ ನೀರಿಗಾಗಿ ಸಾರ್ವಜನಿಕರು ಪರದಾಡುತ್ತಿದ್ದಾರೆ ಎಂದು ಆರೋಪಿಸಿದರು.
ಚಿತ್ತಾಪುರ ಪಟ್ಟಣಕ್ಕೆ ಶುದ್ಧವಾದ ಕುಡಿಯುವ ನೀರು ಸರಬರಾಜು ಮಾಡುತ್ತೇವೆ ಎಂದು ಹೇಳಿದ ಪುರಸಭೆಯವರು ಅಶುದ್ಧ ನೀರು ಸರಬರಾಜು ಮಾಡುತ್ತಿದ್ದಾರೆ. ಇದರಿಂದ ಪಟ್ಟಣದಲ್ಲಿ ವಾಂತಿ ಭೇದಿಯಂತಹ ಸಾಂಕ್ರಮಿಕ ರೋಗಗಳಿಗೆ ಜನರು ತುತ್ತಾಗುತ್ತಿದ್ದಾರೆ. ಇಷ್ಟಾದರೂ ಸಂಬಂಧಪಟ್ಟ ಇಲಾಖೆಯವರು ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು.
ಕೂಡಲೇ ಬೇಜವಾಬ್ದಾರಿ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮ ಕೈಗೊಂಡು ಚಿತ್ತಾಪುರ ಪಟ್ಟಣಕ್ಕೆ ಶುದ್ಧವಾದ ಕುಡಿಯುವ ನೀರು ಸರಬರಾಜು ಮಾಡುವ ಕ್ರಮ ಕೈಗೊಳ್ಳಬೇಕು ಎಂದು ಮಹ್ಮದ್ ಇಬ್ರಾಹಿಂ ಒತ್ತಾಯಿಸಿದರು. ಮನವಿ ಪತ್ರ ಸ್ವೀಕರಿಸಿದ ತಹಶೀಲ್ದಾರ್ ನಾಗಯ್ಯ ಹಿರೇಮಠ, ಕೂಡಲೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಡಿಎಸ್‌ಎಸ್ ಮುಖಂಡ ದೇವೇಂದ್ರ ಕುಮಸಿ, ಮಲ್ಲಿನಾಥ ಪಾಟೀಲ, ಸಿದ್ರಾಮ ಕಾಶಿ, ಮಹೇಮೂದ ಸಾಬ್, ಮಲ್ಲಿಕಾರ್ಜುನ ಮುಗುಳಕರ್, ಚಂದ್ರಕಾಂತ ಕಾಶಿ, ಕಲ್ಯಾಣಪ್ಪ ಪೂಜಾರಿ, ಅಂಬಾದಾಸ ಟೇಲರ್ ಸೇರಿದಂತೆ ಇತರರು ಇದ್ದರು.






