ಚಿತ್ತಾಪುರ | ಸಮಾಜಕ್ಕೆ ಭೀಮಣ್ಣ ಖಂಡ್ರೆಯವರ ಕೊಡುಗೆ ಅಪಾರ: ನಾಗರಾಜ ಭಂಕಲಗಿ

ಚಿತ್ತಾಪುರ: ಭೀಮಣ್ಣ ಖಂಡ್ರೆ ಅವರು ಸರಳ ಜೀವನ, ನಿಸ್ವಾರ್ಥ ಸೇವೆ ಹಾಗೂ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಗುಣಗಳಿಂದ ಸಮಾಜ ಸೇವೆಗೆ ಮಾದರಿಯಾಗಿದ್ದರು. ಸಮಾಜದ ವಿರುದ್ಧ ಅವೈಜ್ಞಾನಿಕವಾಗಿ ಮಂಡಿಸಲಾದ ಹಾವನೂರ್ ವರದಿಯನ್ನು ಧೈರ್ಯದಿಂದ ವಿರೋಧಿಸಿ ವೀರಶೈವ ಸಮಾಜದ ಹಕ್ಕುಗಳ ರಕ್ಷಣೆಗೆ ಮುಂಚೂಣಿಯಲ್ಲಿ ನಿಂತ ನಾಯಕರಾಗಿದ್ದರು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ ಹೇಳಿದರು.
ಪಟ್ಟಣದ ವರುಣ ನಗರದ ಶರಣಬಸವೇಶ್ವರ ಮಂದಿರದ ಸಭಾಭವನದಲ್ಲಿ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗೌರವಾಧ್ಯಕ್ಷ ಭೀಮಣ್ಣ ಖಂಡ್ರೆ ಅವರ ನುಡಿನಮನ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಅವರು, 102 ವರ್ಷಗಳ ಸಾರ್ಥಕ ಜೀವನ ನಡೆಸಿದ್ದ ಭೀಮಣ್ಣ ಖಂಡ್ರೆ ಅವರು ಅಜಾತಶತ್ರುವಾಗಿದ್ದರು. ಸ್ವಾತಂತ್ರ್ಯ ಹೋರಾಟಗಾರರಾಗಿ, ಹೈದರಾಬಾದ್ ಕರ್ನಾಟಕದ ವಿಮೋಚನೆಗಾಗಿ, ಏಕೀಕರಣಕ್ಕಾಗಿ ಹೋರಾಡಿದ್ದ ಅವರು, ಶಾಸಕರಾಗಿ, ಸಚಿವರಾಗಿ, ವಿಧಾನಪರಿಷತ್ ಸದಸ್ಯರಾಗಿ ಅಪಾರ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.
ಮುಖಂಡ ಮಲ್ಲರೆಡ್ಡಿ ಗೋಪಸೇನ್ ಮಾತನಾಡಿ, ಖಂಡ್ರೆ ಅವರ ನಿಧನದಿಂದ ಸಮಾಜ ಮಾತ್ರವಲ್ಲದೆ ಇಡೀ ರಾಜ್ಯವೇ ತೀವ್ರ ಆಘಾತ ಅನುಭವಿಸುತ್ತಿದೆ ಎಂದು ಹೇಳಿದರು.
ಮುಖಂಡ ರವೀಂದ್ರ ಸಜ್ಜನಶೆಟ್ಟಿ ಮಾತನಾಡಿ, ವೀರಶೈವ ಸಮಾಜಕ್ಕೆ ಅನ್ಯಾಯವಾದಾಗ ಧೈರ್ಯವಾಗಿ ಸಿಡಿದು ನಿಂತ ಹೋರಾಟಗಾರರು ಖಂಡ್ರೆ ಎಂದು ಸ್ಮರಿಸಿದರು.
ಯುವ ಮುಖಂಡ ಪ್ರಸಾದ ಅವಂಟಿ ಅವರು, ಖಂಡ್ರೆ ಅವರು ತೋರಿಸಿದ ಮಾರ್ಗದರ್ಶನದಂತೆ ಸಮಾಜದ ಹಿತಕ್ಕಾಗಿ ಒಗ್ಗಟ್ಟಿನಿಂದ ಮುಂದುವರೆಯಬೇಕು ಎಂದು ಕರೆ ನೀಡಿದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಸಂಘಟನೆ ಬಲಪಡಿಸುವಲ್ಲಿ ಖಂಡ್ರೆ ಅವರು ಮಹತ್ವದ ಪಾತ್ರ ವಹಿಸಿದ್ದರು ಎಂದರು.
ಇದೇ ವೇಳೆ ಎರಡು ನಿಮಿಷ ಮೌನಾಚರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ನೇಹಲ್ ಪಾಟೀಲ್ ಬೆಳಗುಂಪಾ, ಅಶೋಕ ನಿಪ್ಪಾಣಿ, ಬಸವರಾಜ ಕಾಳಗಿ, ಸೋಮಶೇಖರ ಅಜಲಾಪುರ್, ಅನಿಲಕುಮಾರ ವಡ್ಡಡಗಿ, ರವೀಂದ್ರ ಗೊಬ್ಬುರ, ಎಸ್.ಎನ್. ಪಾಟೀಲ, ಚಂದ್ರಶೇಖರ ಉಟಗೂರ್, ನಾಗರೆಡ್ಡಿ ಗೋಪಸೇನ್, ಬಸವರಾಜ ಸಂಕನೂರ, ಶಿವರಾಜ ಪಾಳೇದ್, ರಮೇಶ್ ಕಾಳನೂರ್, ಸಂಗಣ್ಣಗೌಡ ಸಂಕನೂರ, ಬಸವರಾಜಗೌಡ ಆಲೂರ್, ಮಂಜುನಾಥ ಪೊಲೀಸ್ ಪಾಟೀಲ್, ಅಂಬರೀಶ್ ಸುಲೇಗಾಂವ್, ರಾಚು ಬೊಮ್ಮನಳ್ಳಿ, ಮಲ್ಲಿಕಾರ್ಜುನ ದಂಡಗುಂಡ, ಸಿದ್ದು ರಾಜಾಪುರ, ವೀರಭದ್ರಪ್ಪ ಗುರುಮಿಠಕಲ್, ಕೋಟೇಶ್ವರ ರೇಷ್ಮೆ, ಶರಣಗೌಡ ಸೂಲಹಳ್ಳಿ, ಸಂತೋಷ ಹಾವೇರಿ, ರವಿ ಸಿಂಪಿ, ಅಡೆಪ್ಪ ಖಣದಾಳ ಇದ್ದರು.







