ಚಿತ್ತಾಪುರ | ನಾಲವಾರದಲ್ಲಿ ಹತ್ತಿ ಖರೀದಿ ಕೇಂದ್ರ ಸ್ಥಾಪಿಸಬೇಕು: ವೀರಣ್ಣಗೌಡ ಪರಸರೆಡ್ಡಿ

ಕಲಬುರಗಿ : ಚಿತ್ತಾಪುರ ತಾಲೂಕಿನ ನಾಲವಾರ ವಲಯದಲ್ಲಿ ರೈತರು ಅತಿ ಹೆಚ್ಚು ಹತ್ತಿ ಬೆಳೆಯುತ್ತಿದ್ದು, ಸರ್ಕಾರ ನಾಲವಾರದಲ್ಲಿ ಹತ್ತಿ ಕೇಂದ್ರ ಸ್ಥಾಪಿಸಬೇಕು ಎಂದು ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ವೀರಣ್ಣಗೌಡ ಪರಸರೆಡ್ಡಿ ಹೇಳಿದರು.
ಚಿತ್ತಾಪುರ ಪಟ್ಟಣದ ಪಶು ವೈದ್ಯಕೀಯ ಇಲಾಖೆಯ ಸಭಾಂಗಣದಲ್ಲಿ ನಡೆದ ತಾಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹತ್ತಿ ಬೆಳೆಯದ ಶಹಾಬಾದ್-ತೋನಸನಳ್ಳಿಯಲ್ಲಿ ಹತ್ತಿ ಖರೀದಿ ಕೇಂದ್ರ ತೆರೆದಿರುವುದು ಅವೈಜ್ಞಾನಿಕವಾಗಿದೆ. ಆದ್ದರಿಂದ ನಾಲವಾರ ವಲಯದಲ್ಲಿ ಹತ್ತಿ ಕೇಂದ್ರ ತೆರೆದರೆ ರೈತರಿಗೆ ಅನುಕೂಲವಾಗಲಿದೆ ಎಂದರು.
ನಾಲವಾರದಲ್ಲಿನ ಕೃಷಿ ಉತ್ಪನ್ನ ಕೇಂದ್ರ ಮುಚ್ಚುವ ಹುನ್ನಾರ ನಡೆದಿದೆ ಎಂಬ ಅನುಮಾನ ಬರುತ್ತಿದೆ. ಕೇಂದ್ರದ ಮುಂದಾಳು ಹುದ್ದೆಯಲ್ಲಿನ ಅಧಿಕಾರಿಯನ್ನು ಬೇರೆ ಕಡೆ ವರ್ಗಾವಣೆ ಮಾಡಲಾಗಿದೆ. ಕೂಡಲೇ ಮುಂದಾಳು ಹುದ್ದೆ ಸೇರಿದಂತೆ ಕೃಷಿ ವಿಜ್ಞಾನಿಗಳ ಹಾಗೂ ಸಿಬ್ಬಂದಿಗಳ ನೇಮಕ ಮಾಡಿ ಕೃಷಿ ಶಿಕ್ಷಣ ಉತ್ಪನ್ನ ಕೇಂದ್ರ ಆರಂಭಿಸಬೇಕು. ನಿರ್ಲಕ್ಷ ವಹಿಸಿದರೆ ಕೃಷಿಕ ಸಮಾಜದ ನಿರ್ದೇಶಕರ ನಿಯೋಗ ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿಗಳಿಗೆ ಭೇಟಿಯಾಗಿ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಕೆಲ ಮುಗ್ಧ ರೈತರು ಎಫ್'ಡಿಎ ಮಾಡಿಸದೇ ಇರುವುದರಿಂದ ಸರ್ಕಾರದ ಬೆಳೆ ಹಾನಿ ಪಡೆಯುವಲ್ಲಿ ವಂಚಿತರಾಗಿದ್ದಾರೆ. ಕೂಡಲೇ ಸರ್ಕಾರ ಅವರಿಗೆ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ನಾಗರೆಡ್ಡಿ ಗೋಪಸೇನ್ ಮಾತನಾಡಿದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸಂಜೀವಕುಮಾರ ಮಾನಕರ್, ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಶಂಕರ ಕಣ್ಣಿ, ತೋಟಗಾರಿಕೆ ಇಲಾಖೆಯ ಅಧಿಕಾರಿ ರಾಜಕುಮಾರ ಗೋವಿನ, ಅರಣ್ಯ ಇಲಾಖೆಯ ಅಧಿಕಾರಿ ಎಂ.ಡಿ.ಜಾವೀದ್, ಕೃಷಿಕ ಸಮಾಜದ ಖಜಾಂಚಿ ನಿಂಗಣ್ಣ ಹೇಗಲೇರಿ, ನಿರ್ದೇಶಕರಾದ ಸತ್ಯನಾರಾಯಣ ಯಾದವ, ಶಿವಶರಣರೆಡ್ಡಿ ಭಂಕಲಗಿ, ಪಂಚಾಕ್ಷರಿ ಪೂಜಾರಿ, ಉಪಾಧ್ಯಕ್ಷ ಚನ್ನಬಸಪ್ಪ ಜೀವಣಗಿ, ಪ್ರಧಾನ ಕಾರ್ಯದರ್ಶಿ ನಿಂಗಣ್ಣಗೌಡ ಬಿರಾದಾರ, ಸುಭಾಶ್ಚಂದ್ರ ಅಮ್ಮೋಜಿ, ಕುಮಾರ ರಾಮಚಂದ್ರ, ರವೀಂದ್ರ, ಮಲ್ಲಿಕಾರ್ಜುನ, ಚನ್ನಬಸಪ್ಪಗೌಡ, ಕೃಷಿ ಇಲಾಖೆಯ ಅಧಿಕಾರಿ ರವೀಂದ್ರಕುಮಾರ, ಪುರಸಭೆಯ ಲೋಹಿತ ಕಟ್ಟಿಮನಿ ಸೇರಿದಂತೆ ಇತರರು ಇದ್ದರು.







