ಚಿತ್ತಾಪುರ | ಪತ್ರಕರ್ತರು ಅಪ್ರಮಾಣಿಕರಾದರೆ ಸಮಾಜದಲ್ಲಿ ಅರಾಜಕತೆ: ಸಚಿವ ಪ್ರಿಯಾಂಕ್ ಖರ್ಗೆ

ಚಿತ್ತಾಪುರ: ಪತ್ರಕರ್ತರು ಅಪ್ರಾಮಾಣಿಕರಾದರೆ ಸಮಾಜದಲ್ಲಿ ಅರಾಜಕತೆ ಸೃಷ್ಟಿಯಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟರು.
ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ಹಿರಿಯ ಪತ್ರಕರ್ತ ದಿ. ನಾಗಯ್ಯಸ್ವಾಮಿ ಅಲ್ಲೂರ್ ಅವರ ಗೆಳೆಯರ ಬಳಗದ ವತಿಯಿಂದ ರವಿವಾರ ಹಮ್ಮಿಕೊಂಡಿದ್ದ “ನಾಗಾವಿ ನಕ್ಷತ್ರ” ಸಂಸ್ಮರಣ ಗ್ರಂಥ ಲೋಕಾರ್ಪಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾಗಯ್ಯಸ್ವಾಮಿ ಅಲ್ಲೂರ್ ಅವರು ಅತ್ಯಂತ ಪ್ರಾಮಾಣಿಕ ಪತ್ರಕರ್ತರಾಗಿದ್ದು, ಪ್ರಾಮಾಣಿಕತೆಯನ್ನು ಜೀವನ ಮೌಲ್ಯವಾಗಿ ಮೈಗೂಡಿಸಿಕೊಂಡಿದ್ದರು. ಅವರ ಈ ಗುಣವೇ ಅವರನ್ನು ಕೇವಲ ಪತ್ರಿಕಾರಂಗಕ್ಕೆ ಮಾತ್ರ ಸೀಮಿತಗೊಳಿಸದೆ, ಸಾಂಸ್ಕೃತಿಕ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿಯೂ ಒಬ್ಬ ನಿಷ್ಠಾವಂತ ಬರಹಗಾರರನ್ನಾಗಿ ರೂಪಿಸಿತು. ಜನರಿಗಾಗಿ ಹಾಗೂ ಮಕ್ಕಳಿಗಾಗಿ ಅವರು ಮಾಡಿದ ಸಮಾಜ ಸೇವೆ ಅವರನ್ನು ಸಮಾಜಮುಖಿ ಚಿಂತಕ ಮತ್ತು ಶಿಕ್ಷಣ ಪ್ರೇಮಿಯಾಗಿ ಗುರುತಿಸುವಂತೆ ಮಾಡಿತು ಎಂದು ಸಚಿವರು ಹೇಳಿದರು.
ಪತ್ರಕರ್ತರು ಅಪ್ರಾಮಾಣಿಕರಾದರೆ ಸಮಾಜದಲ್ಲಿ ಅರಾಜಕತೆ ಉಂಟಾಗುತ್ತದೆ ಎಂದು ತಿಳಿಸಿದ ಅವರು, ನಾಗಯ್ಯಸ್ವಾಮಿಯಂತಹ ಪತ್ರಕರ್ತರು ಸಮಾಜದ ಎಲ್ಲಾ ವರ್ಗದವರಿಗೆ ಮಾದರಿಯಾಗಿದ್ದಾರೆ. ಅವರು ನಮ್ಮೊಂದಿಗೆ ಈಗ ಇಲ್ಲದಿದ್ದರೂ, ಅವರ ಸ್ನೇಹಿತರ ಬಳಗ ಅವರ ಜೀವನ ಹಾಗೂ ಸಾಧನೆಗಳನ್ನು ದಾಖಲಿಸುವ ಉದ್ದೇಶದಿಂದ “ನಾಗಾವಿ ನಕ್ಷತ್ರ” ಎಂಬ ಸಂಸ್ಮರಣ ಗ್ರಂಥ ಹೊರತಂದಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.
ನಾಗಯ್ಯಸ್ವಾಮಿ ಅವರ ಅಕಾಲಿಕ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ ಸಚಿವರು, ವೇದಿಕೆಯ ಮೇಲಿದ್ದ ಅವರ ಕುಟುಂಬ ವರ್ಗದವರಿಗೆ ಧೈರ್ಯ ತುಂಬಿ, ಗೆಳೆಯರ ನೆರವಿನ ಜೊತೆಗೆ ತಾವು ವೈಯಕ್ತಿಕವಾಗಿ ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸ್ನೇಹಿತ ವಲಯದಿಂದ ಸಂಗ್ರಹಿಸಲಾದ 1.90 ಲಕ್ಷ ರೂ. ಮೊತ್ತದ ಚೆಕ್ ಅನ್ನು ಸಚಿವರು ಮೃತರ ಕುಟುಂಬದವರಿಗೆ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಹಲಕಟ್ಟಿಮನಿ ಮಠದ ಮುನೀಂದ್ರ ಶಿವಾಚಾರ್ಯ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್, ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ್ ಮಾತನಾಡಿದರು. ಸಂಸ್ಮರಣ ಗ್ರಂಥದ ಪ್ರಧಾನ ಸಂಪಾದಕ ಲಿಂಗಪ್ಪ ಮಲ್ಕನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ವೇಳೆ ಮಹಮೂದ್ ಸಾಹೇಬ್, ಲಿಂಗಾರೆಡ್ಡಿ ಬಾಸರೆಡ್ಡಿ, ಭವಾನಿ ಸಿಂಗ್ ಠಾಕೋರ್, ಶಿವಾನಂದ ಪಾಟೀಲ್ ಮರ್ತೂರು, ಭೀಮಣ್ಣ ಸಾಲಿ, ಚಂದ್ರಶೇಖರ ಆವಂಟಿ, ಶಂಕರಗೌಡ ಪಾಟೀಲ್, ಬಸವರಾಜ ಬಳೂಂಡಗಿ, ವೀರಭದ್ರಪ್ಪ ಗುರುಮಿಟಕಲ್, ವೀರೇಂದ್ರ ಕೊಲ್ಲೂರ್, ಸಿದ್ಧಮ್ಮ, ಶಿವಾನಂದ ನಾಲವಾರ, ದೇವಪ್ಪ ನಂದೂರಕರ್, ಕಾಶಿರಾಯ ಕಲಾಲ್, ನಟರಾಜ ಶಿಲ್ಪಿ ಸೇರಿದಂತೆ ಅನೇಕ ಮುಖಂಡರು, ಪತ್ರಕರ್ತರು, ಅಭಿಮಾನಿಗಳು ಹಾಗೂ ಗೆಳೆಯ ಬಳಗದವರು ಉಪಸ್ಥಿತರಿದ್ದರು.
ರಾಚಯ್ಯ ಸ್ವಾಮಿ ಸ್ವಾಗತಿಸಿದರು. ನರಸಪ್ಪ ಚಿನ್ನಾಕಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.







