ಚಿತ್ತಾಪುರ | ಭಕ್ತಿ, ವೈರಾಗ್ಯ, ಜ್ಞಾನಕ್ಕೆ ಮಾದರಿಯಾಗಿದ್ದ ಕನಕದಾಸರು : ಡಾ.ನಾಗಣ್ಣ ಕಿಲಾರಿ
ಭಕ್ತ ಕನಕದಾಸ ಜಯಂತ್ಯೋತ್ಸವ ಸಮಾರಂಭ

ಚಿತ್ತಾಪುರ: ಭಕ್ತ ಕನಕದಾಸರು ಕನ್ನಡ ನಾಡು ಕಂಡ ಅಪರೂಪದ ಸಂತರು. ತಮ್ಮ ಜೀವನದಲ್ಲಿ ಭಕ್ತಿ, ವೈರಾಗ್ಯ, ಜ್ಞಾನ ಹಾಗೂ ಸಮಾಜದ ಒಳಿತಿಗಾಗಿ ಶ್ರಮಿಸಿದ ಮಹಾನ್ ಚೇತನರಾಗಿದ್ದರು ಎಂದು ಜೇವರ್ಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ನಾಗಣ್ಣ ಕಿಲಾರಿ ಹೇಳಿದರು.
ಪಟ್ಟಣದ ಪ್ರಜಾಸೌಧ ಕಚೇರಿಯಲ್ಲಿ ತಾಲೂಕು ಆಡಳಿತದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಭಕ್ತ ಕನಕದಾಸ ಜಯಂತ್ಯೋತ್ಸವ ಸಮಾರಂಭದಲ್ಲಿ ಉಪನ್ಯಾಸ ನೀಡಿದ ಅವರು, ಸುಖ, ಸಂಪತ್ತು ಹಾಗೂ ಅಧಿಕಾರಕ್ಕಿಂತ ಭಗವಂತನ ಭಕ್ತಿ ಮತ್ತು ಮಾನವ ಸೇವೆಯೇ ಶ್ರೇಷ್ಠ ಎಂಬುದನ್ನು ಕನಕದಾಸರು ತಮ್ಮ ಜೀವನದ ಮೂಲಕ ತೋರಿಸಿಕೊಟ್ಟಿದ್ದಾರೆ. ಗುರುಗಳ ಮಾರ್ಗದರ್ಶನದಲ್ಲಿ ಆಧ್ಯಾತ್ಮಿಕ ಚಿಂತನೆಗೆ ತೊಡಗಿಸಿಕೊಂಡು, ತಮ್ಮ ಕೀರ್ತನೆಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ ಎಂದು ತಿಳಿಸಿದರು.
ತಾಲೂಕು ಕುರುಬ ಸಮಾಜದ ಮಾಜಿ ಅಧ್ಯಕ್ಷ ಜುಮ್ಮಣ್ಣ ಪೂಜಾರಿ ಮಾತನಾಡಿದರು. ತಹಸೀಲ್ದಾರ್ ನಾಗಯ್ಯ ಹಿರೇಮಠ ಸಮಾರಂಭ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಗ್ರೇಡ್-2 ತಹಶೀಲ್ದಾರ್ ರಾಜಕುಮಾರ ಮರತೂರಕರ, ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ, ತಾಲೂಕು ಕುರುಬ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಡಬ್ಬಿಗೇರ್, ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ ಮೊಗಲಾ, ಪಿಕೆಪಿಎಸ್ ಅಧ್ಯಕ್ಷರಾದ ಬಸವರಾಜ ಪೂಜಾರಿ ಮೊಗಲಾ, ಜಗನ್ನಾಥ ಆಲೂರು, ಪ್ರಭು ಗಂಗಾಣಿ, ಸಂತೋಷ ಪೂಜಾರಿ, ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ನಾಗರೆಡ್ಡಿ ಗೋಪಶೇನ, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬೊಮ್ಮನಳ್ಳಿಕರ, ಟಿಎಪಿಸಿಎಂಎಸ್ ಅಧ್ಯಕ್ಷ ದೇವಿಂದ್ರ ಅರಣಕಲ್, ಪ್ರಮುಖರಾದ ಹಣಮಂತ ಪೂಜಾರಿ, ಶರಣು ಬಾಗೋಡಿ, ಪ್ರದೀಪ ಕದ್ದರಗಿ, ಶಂಕರ ಪೂಜಾರಿ, ಭೋಜು ಶೇರಿ, ಭೀಮು ಕರದಾಳ, ಅಯ್ಯಪ್ಪ ರಾಮತೀರ್ಥ ಹಾಗೂ ಶಾಂತಮ್ಮ ಆಯರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮಂಜುನಾಥ ಮಹೇಂದ್ರ ಸ್ವಾಗತಿಸಿದರು. ವಿಠಲರಾವ ವಂದಿಸಿದರು. ಡಾ. ಶಂಕರ ಕಣ್ಣಿ ನಿರೂಪಿಸಿದರು.
ಇದಕ್ಕೂ ಮೊದಲು ಕನಕದಾಸರ ಭಾವಚಿತ್ರದ ಭವ್ಯ ಮೆರವಣಿಗೆಗೆ ಸೂಗೂರ ಎನ್. ಶ್ರೀ ಭೋಜಲಿಂಗೇಶ್ವರ ಸಂಸ್ಥಾನ ಮಠದ ಶ್ರೀ ಹಿರಗಪ್ಪ ತಾತನವರು ಚಾಲನೆ ನೀಡಿದರು. ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.






