ಚಿತ್ತಾಪುರ | ಕೃಷಿ ಪರಿಕರ ಮಳಿಗೆಗಳ ಮೇಲೆ ಅಧಿಕಾರಿಗಳಿಂದ ದಿಢೀರ್ ತಪಾಸಣೆ

ಚಿತ್ತಾಪುರ: ತಾಲೂಕಿನ ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ತಹಶೀಲ್ದಾರ್ ನಾಗಯ್ಯ ಹೀರೆಮಠ ನೇತೃತ್ವದ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿತು.
ತಂಡದಲ್ಲಿ ಸಹಾಯಕ ಕೃಷಿ ನಿರ್ದೇಶಕ ಸಂಜೀವಕುಮಾರ ಮಾನಕರ್, ಕಂದಾಯ ನಿರೀಕ್ಷಕ ಮಂಜುನಾಥ ಮಹಾರುದ್ರ, ಗ್ರಾಮ ಆಡಳಿತ ಅಧಿಕಾರಿ ಮೈನೋದ್ದಿನ್ ಹಾಗೂ ಪೊಲೀಸ್ ಮುಖ್ಯ ಪೇದೆ ವಿಜಯಕುಮಾರ ರಾಠೋಡ ಭಾಗವಹಿಸಿದ್ದರು.
ಮೊದಲು ನಮ್ಮ ಗ್ರೋವರ್ ಸೆಂಟರ್ ಮಳಿಗೆಗೆ ಭೇಟಿ ನೀಡಿದ ಅಧಿಕಾರಿಗಳು ಬಿಲ್ ಪುಸ್ತಕ, ಅಗತ್ಯ ದಾಖಲೆಗಳು ಹಾಗೂ ಗೋದಾಮಿನ ದಾಸ್ತಾನು ಪರಿಶೀಲಿಸಿದರು. ಡಿಎಪಿ ಸೇರಿದಂತೆ ವಿವಿಧ ರಸಗೊಬ್ಬರಗಳ ಲಭ್ಯತೆ ಪರಿಶೀಲಿಸಿ, ರೈತರಿಗೆ ನಿಯಮಿತವಾಗಿ ಗೊಬ್ಬರ ವಿತರಣೆ ಮಾಡುವಂತೆ ಸೂಚನೆ ನೀಡಿದರು.
ಬಳಿಕ ವಿಶ್ವಗುರು ಟ್ರೇಡರ್ಸ್ ಮತ್ತು ಮಹಾಲಕ್ಷ್ಮಿ ಆಗ್ರೋ ಮಳಿಗೆಗಳಿಗೆ ಭೇಟಿ ನೀಡಿ ದಾಸ್ತಾನು ವಹಿ, ದರಪಟ್ಟಿ ಹಾಗೂ ರೈತರಿಗೆ ನೀಡಿರುವ ರಶೀದಿಗಳನ್ನು ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಅಧಿಕಾರಿಗಳು, ರಸಗೊಬ್ಬರ ಮಾರಾಟದ ಸಂದರ್ಭದಲ್ಲಿ ರೈತರಿಗೆ ಕಡ್ಡಾಯವಾಗಿ ರಶೀದಿ ನೀಡಬೇಕು. ನಿಗದಿತ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಗತ್ಯವಿದ್ದರೆ ಪರವಾನಿಗೆಯನ್ನೂ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ರೈತರಿಗೆ ಸಮರ್ಪಕ ದರದಲ್ಲಿ ರಸಗೊಬ್ಬರ ದೊರೆಯುವಂತೆ ಹಾಗೂ ಅಕ್ರಮ ವಹಿವಾಟು ತಡೆಯುವ ಉದ್ದೇಶದಿಂದ ಈ ತಪಾಸಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.






