ಚಿತ್ತಾಪುರ | 18 ವರ್ಷದೊಳಗಿನ ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಪೋಕ್ಸೋ ಕಾಯ್ದೆಯಡಿ ಕಠಿಣ ಶಿಕ್ಷೆ : ನ್ಯಾ.ಕರಣ ಗುಜ್ಜರ್

ಚಿತ್ತಾಪುರ: 18 ವರ್ಷಗಳೊಳಗಿನ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಪೋಕ್ಸೋ ಕಾಯ್ದೆಯಡಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂದು ನಾಲ್ಕನೇ ಹೆಚ್ಚುವರಿ ಜಿಲ್ಲಾ ನ್ಯಾಯಧೀಶ ಕರಣ ಗುಜ್ಜರ್ ಹೇಳಿದರು.
ಪಟ್ಟಣದ ಅಣ್ಣೇಮ್ಮ ಗೊಬ್ಬೂರ ಪ್ರೌಢ ಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಶಿಶು ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪೋಕ್ಸೋ ಕಾಯ್ದೆ ಕುರಿತು ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೋಕ್ಸೋ ಕಾಯ್ದೆಯು 18 ವರ್ಷಗಳೊಳಗಿನ ಮಕ್ಕಳ ಸುರಕ್ಷತೆಗಾಗಿ ಜಾರಿಗೆ ತರಲಾಗಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು ದುಶ್ಚಟಗಳು ಹಾಗೂ ಮೊಬೈಲ್ ತಂತ್ರಜ್ಞಾನದ ದುರ್ಬಳಕೆಗೆ ಒಳಗಾಗಿ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿರುವುದು ಆತಂಕಕಾರಿ ಸಂಗತಿ ಎಂದು ಹೇಳಿದರು.
ಮಕ್ಕಳು ದುಶ್ಚಟಗಳು ಹಾಗೂ ಅನಾವಶ್ಯಕ ಮೊಬೈಲ್ ಬಳಕೆಯಿಂದ ದೂರವಿದ್ದು, ಅಗತ್ಯವಿದ್ದಾಗ ಮಾತ್ರ ಶೈಕ್ಷಣಿಕ ಮತ್ತು ಸಾಮಾನ್ಯ ಜ್ಞಾನಕ್ಕಾಗಿ ಮೊಬೈಲ್ ಬಳಸಬೇಕು. ಉತ್ತಮ ಶಿಕ್ಷಣ ಪಡೆದು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಪೋಕ್ಸೋ ಕಾಯ್ದೆ ಕುರಿತು ಯುವ ಸಮುದಾಯಕ್ಕೆ ನ್ಯಾಯಾಲಯದಲ್ಲಿ ಉಚಿತವಾಗಿ ಮಾಹಿತಿ ನೀಡಲಾಗುತ್ತಿದೆ. ಈ ಸೌಲಭ್ಯವನ್ನು ಯುವಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಿವಿಲ್ ನ್ಯಾಯಧೀಶ ಅಭಿಷೇಕ ಜೋಷಿ, ಸಿಡಿಪಿಓ ಆರತಿ ತುಪ್ಪದ ಮಾತನಾಡಿದರು. ನ್ಯಾಯವಾದಿ ಮಂಜುಳಾ ಸರಡಗಿ ಅವರು ಪೋಕ್ಸೋ ಕಾಯ್ದೆ ಕುರಿತು ವಿವರವಾದ ಉಪನ್ಯಾಸ ನೀಡಿದರು.
ಇದೇ ವೇಳೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರು ಮಕ್ಕಳೊಂದಿಗೆ ಪೋಕ್ಸೋ ಕಾಯ್ದೆ ಕುರಿತು ಸಂವಾದ ನಡೆಸಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾ ಸರ್ಕಾರಿ ವಕೀಲ ವಿ.ಆರ್. ಕಾಂತಾ, ಸಹಾಯಕ ಸರ್ಕಾರಿ ಅಭಿಯೋಜಕಿ ಅಂಜನಾದೇವಿ, ವಕೀಲರ ಸಂಘದ ಅಧ್ಯಕ್ಷ ಸೋಮಶೇಖರ ಕರದಳ್ಳಿ, ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ನ್ಯಾಯವಾದಿಗಳಾದ ಚಂದ್ರಶೇಖರ ಅವಂಟಿ, ಭೀಮಶಪ್ಪ ವಾಡಿ, ಮಲ್ಲಿಕಾರ್ಜುನ ಹೊನಗುಂಟಿ, ಮುಖ್ಯಗುರು ಕಸ್ತೂರಿ ಪಾಟೀಲ್, ದೇವೇಂದ್ರಪ್ಪ ಇಮಾಡಾಪುರ, ಎಎಸ್‌ಐ ವಿಠ್ಠಲ್ ಬಿರಾದಾರ, ಶರಣಬಸಪ್ಪ ಬಮ್ಮನಳ್ಳಿ, ಗೀತಾ ಸೊಲಗೆ, ಲಲಿತಾ ರೆಡ್ಡಿ, ಮನೋಹರ ಹಡಪದ, ಶೈಲಜಾ ಹರಸೂರ, ಅಂಬರೀಶ, ಬಸಮ್ಮ, ಸೈಯದ ಸಲೀಂ, ನಾಗರಾಜ ಕುಲಕರ್ಣಿ, ಕಾಶಿಬಾಯಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಂಜನಾ ಹಿರೆಮಠ ಪ್ರಾರ್ಥನೆಗೀತೆ ಹಾಡಿದರು. ಚಂದ್ರಶೇಖರ ನಾಲವಾರ ಸ್ವಾಗತಿಸಿದರು.ನರಸಪ್ಪ ಚಿನ್ನಾಕಟ್ಟಿ ಕಾರ್ಯಕ್ರಮ ನಿರೂಪಿಸಿದರು.







