ಚಿತ್ತಾಪುರ | ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು, ಉತ್ತಮ ಭವಿಷ್ಯ ರೂಪಿಸಿಕೊಳ್ಳಿ: ನಾಗಲಕ್ಷ್ಮೀ ಚೌಧರಿ

ಚಿತ್ತಾಪುರ: ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯವಾದ ಸಮಯವಾಗಿದ್ದು, ಈ ಅವಧಿಯಲ್ಲಿ ದುಶ್ಚಟಗಳಿಂದ ದೂರವಿದ್ದು, ಉತ್ತಮ ಭವಿಷ್ಯ ರೂಪಿಸಿಕೊಳ್ಳುವತ್ತ ಗಮನ ಹರಿಸಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪಟ್ಟಣದ ರೇವಣಸಿದ್ದಪ್ಪ ಕಾಂತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಂದೆ–ತಾಯಿಗಳು ತಮ್ಮ ಸಂಪೂರ್ಣ ಜೀವನವನ್ನು ಮಕ್ಕಳ ಭವಿಷ್ಯಕ್ಕಾಗಿ ಮುಡುಪಾಗಿಟ್ಟಿರುತ್ತಾರೆ. ಅವರು ಇಟ್ಟಿರುವ ನಂಬಿಕೆಗೆ ವಿದ್ಯಾರ್ಥಿಗಳು ಮೋಸ ಮಾಡಬಾರದು ಎಂದು ತಿಳಿಸಿದರು.
ಯಾವುದೇ ಕಾರಣಕ್ಕೂ ಅತಿಯಾದ ಮೊಬೈಲ್ ಬಳಕೆ, ದುಶ್ಚಟಗಳು ಹಾಗೂ ಪ್ರೀತಿ–ಪ್ರೇಮದ ವ್ಯತ್ಯಯಗಳಿಂದ ದೂರವಿದ್ದು, ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳ ಕುರಿತು ಅರಿವು ಹೊಂದಿ, ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡು, ಓದಿನ ಹಸಿವು ಹಾಗೂ ಸಾಧನೆಯ ಛಲ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಯುವಕರು ಮೊಬೈಲ್ ಸೇರಿದಂತೆ ವಿವಿಧ ದುಶ್ಚಟಗಳಿಗೆ ಒಳಗಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಹೊರಬಂದು ‘ಮುಂದೆ ಗುರಿ, ಹಿಂದೆ ಗುರು’ ಎಂಬ ತತ್ವದೊಂದಿಗೆ, ಸರ್ಕಾರ ನೀಡುತ್ತಿರುವ ಶಿಕ್ಷಣ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ವ್ಯಾಸಂಗ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ.ಮಲ್ಲಿಕಾರ್ಜುನ ಬಿರಾದಾರ ವಹಿಸಿದ್ದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ನಾಗಯ್ಯ ಹಿರೆಮಠ, ತಾಪಂ ಇಓ ಅಕ್ರಂ ಪಾಷಾ, ಸಿಡಿಪಿಓ ಆರತಿ ತುಪ್ಪದ, ಪಿಎಸ್‌ಐ ಮಂಜುನಾಥ ರೆಡ್ಡಿ, ಬಿಇಓ ಶಶಿಧರ ಬಿರಾದಾರ ಸೇರಿದಂತೆ ಅನೇಕ ಗಣ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಡಾ.ಸೂಗೂರೇಶ್ವರ ಪ್ರಾರ್ಥಿಸಿದರು, ಮಲ್ಲಪ್ಪ ಮಾನೇಗಾರ ಸ್ವಾಗತಿಸಿದರು, ಸಂಗಪ್ಪ ಮಾಮನಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.







