ಚಿತ್ತಾಪುರ | ಆರ್‌ಇಎಸ್‌ಸಿ ಹಳೆಯ ವಿದ್ಯಾರ್ಥಿಗಳಿಂದ ಶಿಕ್ಷಕರ ದಿನಾಚರಣೆ

ಚಿತ್ತಾಪುರ: ಶಾಲಾ ದಿನಗಳು ಮುಗಿದು ವರ್ಷಗಳು ಕಳೆದರೂ ಗುರುಗಳ ಮೇಲಿನ ಗೌರವ ಮತ್ತು ವಿದ್ಯಾರ್ಥಿಗಳ ಮೇಲಿನ ಶಿಕ್ಷಕರ ಪ್ರೀತಿ ಎಂದಿಗೂ ಮಾಸುವುದಿಲ್ಲ ಎಂಬುದಕ್ಕೆ ಆರ್‌ಇಎಸ್‌ಸಿ ಹಳೆಯ ವಿದ್ಯಾರ್ಥಿಗಳ ಸಂಘ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಸಾಕ್ಷಿಯಾಯಿತು.
ಹಲವು ವರ್ಷಗಳ ಬಳಿಕ ಒಂದೇ ವೇದಿಕೆಯಲ್ಲಿ ಒಂದಾದ ಹಳೆಯ ವಿದ್ಯಾರ್ಥಿಗಳು ತಮ್ಮ ಪ್ರೀತಿಯ ಗುರುಗಳನ್ನು ಆತ್ಮೀಯವಾಗಿ ಸನ್ಮಾನಿಸಿ ಶಾಲಾ ದಿನಗಳ ಸಿಹಿ ನೆನಪುಗಳಿಗೆ ಮರುಜೀವ ನೀಡಿದರು. ಗುರು-ಶಿಷ್ಯರ ಆತ್ಮೀಯ ಮಾತುಕತೆ, ಹಳೆಯ ನೆನಪುಗಳು ಹಾಗೂ ಭಾವನಾತ್ಮಕ ಕ್ಷಣಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು.
ಭಾರತ ರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಆರ್‌ಇಎಸ್‌ಸಿ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಶಿಕ್ಷಕರಾದ ಮಸ್ತಾನ್ ಪಟೇಲ್, ಪಂಪಾಪತಿ, ಮಲ್ಲಿಕಾರ್ಜುನ, ಖಮರುಸಾ ಬೇಗಂ, ಶಶಿರೇಖಾ ಪವಾರ್, ಸಾವಿತ್ರಿ, ಮನುಜಾ ಹಾಗೂ ಸುಂದರಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಯಾದಗಿರಿಯ ಸರ್ಕಾರಿ ಬಾಲಕಿಯರ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಹರೀಶ್ ರಾಠೋಡ್, ವಿದ್ಯಾರ್ಥಿಗಳ ಬದುಕಿನಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅಂಕ, ಪದವಿ ಅಥವಾ ಉದ್ಯೋಗಕ್ಕಿಂತ ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ಶಿಕ್ಷಕರ ಮಾರ್ಗದರ್ಶನವೇ ಮುಖ್ಯವಾಗಿದ್ದು, ಗುರುಗಳಿಗೆ ಗೌರವ ಸಲ್ಲಿಸುವ ಸಂಸ್ಕೃತಿ ನಿರಂತರವಾಗಿ ಮುಂದುವರಿಯಬೇಕು ಎಂದು ಹೇಳಿದರು.
ರಾಜು ಬಳ್ಳಾ ಮಾತನಾಡಿ, ವಿದ್ಯಾಭ್ಯಾಸ ಮುಗಿಸಿ ಜೀವನದ ವಿವಿಧ ಕ್ಷೇತ್ರಗಳಲ್ಲಿ ನೆಲೆಸಿರುವ ಹಳೆಯ ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ಮರೆಯದೆ ಮತ್ತೆ ಒಂದೆಡೆ ಸೇರಿ ಗೌರವಿಸುತ್ತಿರುವುದು ಸಂತಸದ ಸಂಗತಿ. ಇಂತಹ ಕಾರ್ಯಕ್ರಮಗಳು ಮುಂದಿನ ಪೀಳಿಗೆಗೂ ಗುರು-ಶಿಷ್ಯರ ಸಂಬಂಧದ ಮಹತ್ವವನ್ನು ಸಾರುತ್ತವೆ ಎಂದು ಅಭಿಪ್ರಾಯಪಟ್ಟರು.
ಶಿಕ್ಷಕ ಶಂಕರ್ ಮಾತನಾಡುವ ವೇಳೆ ಭಾವುಕರಾಗಿ, “ಹಳೆಯ ವಿದ್ಯಾರ್ಥಿಗಳು ತಮ್ಮನ್ನು ನೆನಪಿಸಿಕೊಂಡು ಇಂತಹ ಗೌರವ ನೀಡಿರುವುದು ನನ್ನ ಜೀವನದ ಮರೆಯಲಾಗದ ಕ್ಷಣ. ವಿದ್ಯಾರ್ಥಿಗಳ ಪ್ರೀತಿ ಮತ್ತು ಅಭಿಮಾನವೇ ಶಿಕ್ಷಕರಿಗೆ ಸಿಗುವ ಅತ್ಯಂತ ದೊಡ್ಡ ಬಹುಮಾನ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನೇರವಾಗಿ ಭಾಗವಹಿಸಲು ಸಾಧ್ಯವಾಗದ ಹಳೆಯ ವಿದ್ಯಾರ್ಥಿಗಳು ಆನ್‌ಲೈನ್ ನೇರಪ್ರಸಾರದ ಮೂಲಕ ತಮ್ಮ ಗುರುಗಳಿಗೆ ಶುಭಾಶಯ ಕೋರಿದರು. ಅಮೆರಿಕಾದ ಪಲ್ಲವಿ, ಮುಂಬೈನ ಶಾಂತಿ ಚವ್ಹಾಣ್, ಬೆಂಗಳೂರಿನ ಮಲ್ಲು ಎಸ್.ಬಿ. ಹಾಗೂ ಬೆಳಗಾವಿಯ ಆನಂದ ಪಾಟೀಲ್ ಆನ್‌ಲೈನ್ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಜಹೀರ್ ಅಹಮದ್, ಅಬ್ದುಲ್ ವಾಜೀದ್, ನಾಮದೇವ್, ತಿರುಪತಿ ಚವ್ಹಾಣ್, ವಿಶ್ವನಾಥ್ ಕಾಶಿ, ಇಕ್ಬಾಲ್, ಮಲ್ಲಿಕಾರ್ಜುನ, ಮುಕೀಮ್, ಅಬ್ದುಲ್ ಖಾದರ್, ಮಹೇಶ್ ಕಾಶಿ, ರವಿ ಚವ್ಹಾಣ್, ನಾಗರಾಜ್, ಮಹೇಶ್, ಪ್ರೀತಿ, ಮೋಸಿನ್ ಸೇರಿದಂತೆ ಹಲವು ಹಳೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಗುರುಗಳೊಂದಿಗೆ ಸಂತಸದ ಕ್ಷಣಗಳನ್ನು ಹಂಚಿಕೊಂಡರು.






