ಯುವಕರ ಭವಿಷ್ಯಕ್ಕೆ ನೀಲಿನಕ್ಷೆ ರೂಪಿಸಲು ಸಿಎಂ ಸೂಚನೆ : ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ: ರಾಜ್ಯದ ಯುವಕರ ಭವಿಷ್ಯ ರೂಪಿಸುವುದು ಹಾಗೂ ಆರ್ಥಿಕ ಪ್ರಗತಿಗೆ ಹೊಸ ದಿಕ್ಕು ನೀಡುವ ಉದ್ದೇಶದಿಂದ ಸಮಗ್ರ ನೀಲಿನಕ್ಷೆ (ಬ್ಲೂಪ್ರಿಂಟ್) ಸಿದ್ಧಪಡಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ರಾಜ್ಯ ಗೃಹ, ಇ-ಆಡಳಿತ ಹಾಗೂ ಕಲಬುರಗಿ–ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಯುವ ಕರ್ನಾಟಕ ನಿರ್ಮಾಣ ಸರ್ಕಾರದ ಪ್ರಮುಖ ಸಂಕಲ್ಪವಾಗಿದ್ದು, ಯುವಕರ ಉದ್ಯೋಗ, ಕೌಶಲ್ಯಾಭಿವೃದ್ಧಿ ಹಾಗೂ ಆರ್ಥಿಕ ಸಬಲೀಕರಣಕ್ಕೆ ವಿಶೇಷ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗಗಳ ಅಭಿವೃದ್ಧಿಗೆ ಅಗತ್ಯವಾದ ಕಾರ್ಯಕ್ರಮಗಳ ಕುರಿತು ಸಮಗ್ರ ಬ್ಲೂಪ್ರಿಂಟ್ ಸಿದ್ಧಪಡಿಸಲು ಮುಖ್ಯಮಂತ್ರಿ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ” ಎಂದರು.
ಬರ ಪರಿಸ್ಥಿತಿ ಕುರಿತು ಮಂಗಳವಾರ ಮಹತ್ವದ ಸಭೆ :
ಸೂಪರ್ ಎಲ್‌ನಿನೋ ಪರಿಣಾಮದಿಂದ ರಾಜ್ಯದಲ್ಲಿ ಮಳೆ ಕೊರತೆಯ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮಂಗಳವಾರ ಕಲಬುರಗಿಯಲ್ಲಿ ಕಂದಾಯ ಇಲಾಖೆಯ ವಿಭಾಗೀಯ ಅಧಿಕಾರಿಗಳ ಸಭೆ ನಡೆಸಲಿದ್ದು, ಬರ ಪರಿಸ್ಥಿತಿ, ಬೆಳೆ ಹಾಗೂ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಸಮಗ್ರ ಚರ್ಚೆ ನಡೆಸಲಿದ್ದಾರೆ. ಸಭೆಯ ಬಳಿಕ ಮುಖ್ಯಮಂತ್ರಿ ಮಾಧ್ಯಮಗಳಿಗೆ ಮಾಹಿತಿ ನೀಡಲಿದ್ದಾರೆ ಎಂದು ಸಚಿವರು ಹೇಳಿದರು.
ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆ :
ರಾಜ್ಯದಲ್ಲಿ ಎನ್‌ಡಿಆರ್‌ಎಫ್ ಮಾನದಂಡಗಳ ಪ್ರಕಾರ ಶೇ.35ರಷ್ಟು ಮಳೆ ಕೊರತೆ ದಾಖಲಾಗಿದ್ದರೂ ಮುಂಗಾರು ಸಂಪೂರ್ಣ ಕೈಕೊಟ್ಟಿಲ್ಲ. ತೊಗರಿ ಹಾಗೂ ಸೂರ್ಯಕಾಂತಿ ಬೆಳೆಗಳ ಬಿತ್ತನೆಗೆ ಜುಲೈ ಕೊನೆಯ ವಾರದವರೆಗೂ ಅವಕಾಶವಿದೆ ಎಂದು ತಿಳಿಸಿದ ಅವರು, ಜಿಲ್ಲೆಯಲ್ಲಿ ಸದ್ಯ ಸುಮಾರು 45 ದಿನಗಳವರೆಗೆ ಕುಡಿಯುವ ನೀರು ಲಭ್ಯವಿದ್ದು, ಅಗತ್ಯವಿದ್ದರೆ ನೆರೆಯ ರಾಜ್ಯಗಳಿಂದ ನೀರು ಪಡೆಯುವ ಕುರಿತು ಸರ್ಕಾರ ಈಗಾಗಲೇ ಪತ್ರ ಬರೆದಿದೆ ಎಂದರು.
ಮೋಡ ಬಿತ್ತನೆ ಕುರಿತು ಸದ್ಯ ಯಾವುದೇ ಚರ್ಚೆ ನಡೆದಿಲ್ಲ. ಅಂತಹ ನಿರ್ಧಾರ ಕೈಗೊಂಡರೂ ಅದು ವೈಜ್ಞಾನಿಕ ಆಧಾರದ ಮೇಲೆಯೇ ಆಗಲಿದೆ ಎಂದು ಸ್ಪಷ್ಟಪಡಿಸಿದರು.
ಎಸ್‌ಐಆರ್ ಕುರಿತು ಚುನಾವಣಾ ಆಯೋಗಕ್ಕೆ 12 ಪ್ರಶ್ನೆಗಳು :
ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಈ ಪ್ರಕ್ರಿಯೆ ಚುನಾವಣಾ ಆಯೋಗದ ವ್ಯಾಪ್ತಿಗೆ ಸೇರಿದ್ದು, ರಾಜ್ಯ ಸರ್ಕಾರದ ಪಾತ್ರ ಇಲ್ಲ ಎಂದು ಹೇಳಿದರು.
“ಎಸ್‌ಐಆರ್ ಕುರಿತು ಪಾರದರ್ಶಕತೆ ಕಾಪಾಡುವ ಉದ್ದೇಶದಿಂದ ಚುನಾವಣಾ ಆಯೋಗಕ್ಕೆ 12 ಪ್ರಶ್ನೆಗಳನ್ನು ಕೇಳಿದ್ದೇನೆ. ನಮಗೆ ಸಮಯ ನೀಡದ ಆಯೋಗ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಸಮಯ ನೀಡಿದೆ. ಇದರಿಂದ ಆಯೋಗದ ಕಾರ್ಯವೈಖರಿ ಕುರಿತು ಪ್ರಶ್ನೆಗಳು ಉದ್ಭವಿಸುತ್ತವೆ. ನಾವು ಎಸ್‌ಐಆರ್ ವಿರೋಧಿಸುತ್ತಿಲ್ಲ; ಆದರೆ ಪ್ರಕ್ರಿಯೆ ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿರಬೇಕು ಎಂಬುದೇ ನಮ್ಮ ಆಗ್ರಹ” ಎಂದು ಹೇಳಿದರು.
ಗೃಹ ಇಲಾಖೆಯಲ್ಲಿ ಸುಧಾರಣೆಗೆ ಕ್ರಮ :
ಗೃಹ ಇಲಾಖೆಯಲ್ಲಿ ಅಗತ್ಯವಿರುವ ಕಡೆ ಹೊಸ ಪೊಲೀಸ್ ಠಾಣೆಗಳ ಸ್ಥಾಪನೆ ಸೇರಿದಂತೆ ವಿವಿಧ ಸುಧಾರಣೆಗಳ ಕುರಿತು ಒಂದು ವಾರದೊಳಗೆ ಸಮಗ್ರ ಚರ್ಚೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.
ಈ ವೇಳೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಮಾತನಾಡಿ, ಚುನಾವಣಾ ಪ್ರಕ್ರಿಯೆಯಲ್ಲಿ ಹೊರರಾಜ್ಯದ ಅಧಿಕಾರಿಗಳನ್ನು ಬಳಸುವಂತೆ ಬಿಜೆಪಿ ಮಾಡಿರುವ ಆಗ್ರಹವನ್ನು ಟೀಕಿಸಿ, “ಚುನಾವಣಾ ವ್ಯವಸ್ಥೆಯನ್ನು ದುರ್ಬಳಕೆ ಮಾಡುವ ಉದ್ದೇಶದಿಂದಲೇ ಇಂತಹ ಬೇಡಿಕೆ ಮುಂದಿಡಲಾಗಿದೆ” ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಸಚಿವರಾದ ಶಾಸಕರಾದ ಎಂ.ವೈ. ಪಾಟೀಲ್, ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.






