ಜು.6, 7ರಂದು ಸಿಎಂ ಕಲಬುರಗಿ ಪ್ರವಾಸ : ಅಧಿಕಾರಿಗಳು ಕೇಂದ್ರಸ್ಥಾನದಲ್ಲಿರುವಂತೆ ಡಿ.ಸಿ. ಸೂಚನೆ

ಕಲಬುರಗಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಜುಲೈ 6 ಮತ್ತು 7ರಂದು ಕಲಬುರಗಿ ಜಿಲ್ಲಾ ಪ್ರವಾಸ ಕೈಗೊಂಡು ವಿಭಾಗ ಮಟ್ಟದ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಿರುವ ಹಿನ್ನೆಲೆಯಲ್ಲಿ ಎಲ್ಲ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು, ಸಿದ್ಧತೆಗಳನ್ನು ಸಮರ್ಪಕವಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಭಾನುವಾರ ಸರ್ಕಾರಿ ರಜೆ ಇದ್ದರೂ ಸಹ ಮುಖ್ಯಮಂತ್ರಿಗಳ ಪ್ರವಾಸಕ್ಕೆ ಸಂಬಂಧಿಸಿದ ಎಲ್ಲ ಕೆಲಸಗಳನ್ನು ಸಂಜೆಯೊಳಗೆ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು.
ಮುಖ್ಯಮಂತ್ರಿಗಳು ಜುಲೈ 6ರಂದು ರಾತ್ರಿ ಕಲಬುರಗಿಗೆ ಆಗಮಿಸಿ ವಾಸ್ತವ್ಯ ಹೂಡಲಿದ್ದು, ಜುಲೈ 7ರಂದು ಬೆಳಿಗ್ಗೆ ಕಲಬುರಗಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಪ್ರದೇಶದ ಸಚಿವರು, ಶಾಸಕರು, ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಒಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸುವ ನಿರೀಕ್ಷೆ ಇದೆ.
ಗಣ್ಯರ ಭದ್ರತೆ, ಶಿಷ್ಠಾಚಾರ ಹಾಗೂ ಕಾರ್ಯಕ್ರಮದ ವ್ಯವಸ್ಥೆಯಲ್ಲಿ ಯಾವುದೇ ಲೋಪವಾಗದಂತೆ ಎಲ್ಲ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಪ್ರವಾಸ ಯಶಸ್ವಿಗೊಳಿಸಲು ವಿವಿಧ ಸಮಿತಿಗಳನ್ನು ರಚಿಸಲಾಗುತ್ತಿದ್ದು, ಅಧಿಕಾರಿಗಳು ತಮಗೆ ವಹಿಸಲಾದ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಸಭೆ ನಡೆಯುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ಕ್ರಮ ಕೈಗೊಳ್ಳಬೇಕು ಹಾಗೂ ವಿಕಾಸ ಸೌಧ ಆವರಣವನ್ನು ಸಂಪೂರ್ಣ ಸ್ವಚ್ಛಗೊಳಿಸಬೇಕು ಎಂದು ಸೂಚಿಸಿದರು.
ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಆಗಮಿಸುವ ಅಧಿಕಾರಿಗಳಿಗೆ ಸಾರಿಗೆ, ವಸತಿ ಹಾಗೂ ಮುಖ್ಯಮಂತ್ರಿ, ಸಚಿವರು ಮತ್ತು ಇತರ ಗಣ್ಯರಿಗೆ ಊಟೋಪಚಾರದ ವ್ಯವಸ್ಥೆ ಸಮರ್ಪಕವಾಗಿರಬೇಕು. ಜೊತೆಗೆ ಪ್ರಗತಿ ಪರಿಶೀಲನೆಗೆ ಅಗತ್ಯವಿರುವ ಇಲಾಖಾವಾರು ಮಾಹಿತಿಯನ್ನು ತಕ್ಷಣ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಎಸ್.ಪಿ ಅಡ್ಡೂರು ಶ್ರೀನಿವಾಸುಲು, ಜಿಲ್ಲಾ ಪಂಚಾಯತ್ ಸಿ.ಇ.ಓ ರಾಹುಲ ಸಂಕನೂರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಷ್ ರೆಡ್ಡಿ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸೇರಿದಂತೆ ಅನೇಕ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.






