ನವ ಕಲಬುರಗಿ ನಿರ್ಮಾಣಕ್ಕೆ ಪಣ : ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ: ಜಿಲ್ಲೆಯ ಸಮಸ್ತ ಅಭಿವೃದ್ದಿಗೆ ನೀಲಿ ನಕ್ಷೆ ತಯಾರಾಗಿದ್ದು, ಅದರ ಅಡಿಯಲ್ಲಿ ಮುಂದಿನ ವರ್ಷದೊಳಗೆ ಜಿಲ್ಲೆಯನ್ನು ಅಭಿವೃದ್ದಿಪಡಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದ ಗಂಜ್ ಪ್ರದೇಶದಲ್ಲಿರುವ ನಗರೇಶ್ವರ ಪ್ರೌಢಶಾಲೆಯಲ್ಲಿ ನಡೆದ 70ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಲಬುರಗಿ ಜಿಲ್ಲೆಯಲ್ಲಿ ನವೋದ್ಯಮಕ್ಕೆ ಉತ್ತೇಜನ, ಪ್ರವಾಸೋದ್ಯಮ ಅಭಿವೃದ್ದಿ, ಯುವ ಸಬಲೀಕರಣ, ಶೈಕ್ಷಣಿಕ ಹಾಗೂ ಆರ್ಥಿಕ ಸಬಲತೆ ಹೊಂದುವ ಸಮಗ್ರ ಅಭಿವೃದ್ದಿಗಾಗಿ ನವ ಕಲಬುರಗಿ ನಿರ್ಮಾಣದ ನೀಲಿನಕ್ಷೆ ತಯಾರಾಗಿದ್ದು ಮುಂದಿನ ಎರಡು ವಾರದಲ್ಲಿ ಸಾರ್ವಜನಿಕರ ಮುಂದೆ ಇಡಲಿದ್ದೇವೆ ಎಂದು ಅವರು ಹೇಳಿದರು.
ಕಲಬುರಗಿ ಜಿಲ್ಲೆಯನ್ನು ಸ್ಥಳೀಯ ಆರ್ಥಿಕ ವೇಗವರ್ಧಕ ಕಾರ್ಯಕ್ರಮ ( Local Economy Accelerator Programme - LEAP) ಅಡಿಯಲ್ಲಿ ಪ್ರವಾಸೋದ್ಯಮ, ಕೃಷಿ, ಕೈಗಾರಿಕೆ, ತಂತ್ರಜ್ಞಾನ, ಎಲೆಕ್ಟ್ರಾನಿಕ್, ಉದ್ಯಮಶೀಲತೆ ಕ್ಷೇತ್ರಗಳ ಅಭಿವೃದ್ದಿ ಪಡಿಸಲಾಗುವುದು ಎಂದು ತಮ್ಮ ಕನಸಿನ ಯೋಜನೆಗಳಪಟ್ಟಿ ಮಾಡಿದರು.
ಪ್ರವಾಸೋದ್ಯಮಕ್ಕೆ ಬಲ ತುಂಬುವುದು, ಕೃಷಿ ಕ್ಷೇತ್ರದಲ್ಲಿ ಸ್ಥಿರತೆ, ಕೈಗಾರಿಕೆಗಳ ಸ್ಥಾಪನೆ, ಮಾನವ ಸಂಪನ್ಮೂಲ ಅಭಿವೃದ್ದಿ, ಕೌಶಲ್ಯಾಭಿವೃದ್ದಿ, ಆರ್ಥಿಕ ಸ್ಥಿರತೆ ತರುವ ಉದ್ದೇಶದಿಂದ ಲೀಪ್ ಯೋಜನೆ ಜಾರಿಗೊಳಿಸಲಾಗುವುದು ಎಂದು ಸಚಿವರು ಹೇಳಿದರು.
ಇದೇ ಸಂದರ್ಭದಲ್ಲಿ ಸಚಿವರು ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ ನಂತರ ಭಾವಚಿತ್ರ ಹಾಗೂ ಸ್ಥಬ್ಧಚಿತ್ರ ಮೆರವಣಿಗೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ, ಆಳಂದ ಶಾಸಕ ಬಿ.ಆರ್.ಪಾಟೀಲ್, ಉತ್ತರ ಮತಕ್ಷೇತ್ರದ ಶಾಸಕಿ ಖನೀಜ್ ಫಾತೀಮಾ, ಶಾಸಕ ಅಲ್ಲಮಪ್ರಭು ಪಾಟೀಲ್, ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ್, ಜಗದೇವ ಗುತ್ತೇದಾರ್, ಕುಡಾ ಅಧ್ಯಕ್ಷ ಮಝಹರ್ ಖಾನ್ ಆಲಂ, ಪ್ರಾದೇಶಿಕ ಆಯುಕ್ತೆ ಝಹೀರಾ ನಸೀಮ್, ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್, ಅರುಣಕುಮಾರ್ ಎಂ.ವೈ ಪಾಟೀಲ, ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ., ಎಸ್ಪಿ ಅಡ್ಡೂರು ಶ್ರೀನಿವಾಸಲು, ಪಾಲಿಕೆ ಆಯುಕ್ತ ಅವಿನಾಶ್ ಶಿಂಧೆ, ಜಿಲ್ಲಾ ಪಂಚಾಯತಿ ಸಿಇಒ ಭoವರ್ ಸಿಂಗ್ ಮೀನಾ, ಸೇರಿದಂತೆ ಮತ್ತಿತರರು ಇದ್ದರು.







