ಕಲಬುರಗಿ| ನೆರೆ ಹಾವಳಿ ಪ್ರದೇಶಕ್ಕೆ ಭಾರತ ಕಮ್ಯುನಿಸ್ಟ್ ಪಕ್ಷ (ಎಂ) ನಿಯೋಗದಿಂದ ಭೇಟಿ; ಅಗತ್ಯ ಕ್ರಮಕ್ಕೆ ಆಗ್ರಹ

ಕಲಬುರಗಿ: ನೆರೆ ಹಾವಳಿಗೆ ಒಳಗಾದ ಜಿಲ್ಲೆಯ ಕೆಲವು ಪ್ರದೇಶಗಳಿಗೆ ಭಾರತ ಕಮ್ಯುನಿಸ್ಟ್ ಪಕ್ಷ (ಎಂ) ನಿಯೋಗದಿಂದ ಭೇಟಿ ಮಾಡಿ, ಪರಿಶೀಲನೆ ನಡೆಸಿದೆ.
ಫರಹತಾಬಾದ್ ಸಮೀಪದ ಕೂಡಿ ದರ್ಗಾದಲ್ಲಿ ಆಸರೆ ಪಡೆದುಕೊಂಡ ನಾಲ್ಕು ಗ್ರಾಮಗಳ ಸಂತ್ರಸ್ತರನ್ನು ಭೇಟಿ ಮಾಡಿದ ನಿಯೋಗವು ಸಂತ್ರಸ್ತರಿಗೆ ನೀಡಬೇಕಿರುವ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿದೆ.
ಮನೆಗಳ ಎಲ್ಲ ವಸ್ತುಗಳು ನೆರೆಯಲ್ಲಿ ಕೊಚ್ಚಿ ಹೋಗಿವೆ. ಉಟ್ಟ ಬಟ್ಟೆಯ ಮೇಲೆ ಕೂಡಿ ದರ್ಗಾದಲ್ಲಿ ಆಸರೆ ಪಡೆದುಕೊಂಡಿದ್ದಾರೆ. ಇಂತಹ ಸಂತ್ರಸ್ತರಿಗೆ ಅಗತ್ಯ ಸವಲತ್ತು ನೀಡಬೇಕೆಂದು ನಿಯೋಗದ ಮುಖಂಡರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಕಾಳಜಿ ಕೇಂದ್ರದಲ್ಲಿ ಮಕ್ಕಳು, ವೃದ್ಧರಿಗೂ ಬೆಚ್ಚನೆಯ ಹೊದಿಕೆ ಇಲ್ಲವಾಗಿದೆ. ಕುಡಿಯಲು ಶುದ್ಧ ನೀರು ಇಲ್ಲ. ಗಂಜಿ ಕೇಂದ್ರದಲ್ಲಿ ಅನ್ನ ಮತ್ತು ಸಾರು ಬಿಟ್ಟರೆ ಮತ್ತೇನೂ ಇಲ್ಲ. ನೆರೆಯ ಸಂದರ್ಭದಲ್ಲಿ ತೀವ್ರ ತಣ್ಣನೆ ಹವಾಮಾನ ಇತ್ಯಾದಿಯಿಂದಾಗಿ ಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಮ ಬೀರುವ ಸಾಧ್ಯತೆಗಳು ಇರುತ್ತವೆ. ಇದೇ ವೇಳೆ ಸಂತ್ರಸ್ತರಿಗೆ ಪೌಷ್ಠಿಕಯುಕ್ತ ಆಹಾರ, ಮಕ್ಕಳಿಗೆ ಹಾಲು ವಿತರಿಸುವ ಅಗತ್ಯ ಇರುತ್ತದೆ. ಕೂಡಲೇ ಸರ್ಕಾರ ಅಗತ್ಯತೆಗಳನ್ನು ಪೂರೈಸಬೇಕು ಎಂದಿದ್ದಾರೆ.
ಹೆಣ್ಣು ಮಕ್ಕಳ ಮಾಸಿಕ ಋತು ಸ್ರಾವದ ಸಂದರ್ಭದಲ್ಲಿ ಉಪಯೋಗಿಸುವ ಪ್ಯಾಡ್ ಒದಗಿಸಬೇಕು, ಉದ್ಯೋಗ ಖಾತ್ರಿ ಕೆಲಸದ ಕೂಲಿಹಣ ಬಾಕಿ ಇರುವುದನ್ನು ಕೂಡಲೇ ವಿತರಿಸಬೇಕು, ಮೂರು ದಿನಗಳಲ್ಲಿ ಎಲ್ಲರಿಗೂ ಉದ್ಯೋಗ ಖಾತ್ರಿ ಕೆಲಸವನ್ನು ಎನ್ ಎಂ ಆರ್ ಜನರೇಟ್ ಮಾಡಿ ಒದಗಿಸಬೇಕು, ಕೂಡಲೇ ಎಲ್ಲರ ಆರೋಗ್ಯ ತಪಾಸಣೆ ಮಾಡಿಸಿ ಅಗತ್ಯವಿದ್ದಲ್ಲಿ ವೈದ್ಯರ ಸಲಹೆಯ ಮೇರೆಗೆ ಉಚಿತವಾಗಿ ಔಷಧಿ ಒದಗಿಸಬೇಕು ಎಂದು ನಿಯೋಗ ಜಿಲ್ಲಾಡಳಿತಕ್ಕೆ ಆಗ್ರಹಿಸಿದೆ.
ನಿಯೋಗದಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ, ರಾಜ್ಯ ಸಮಿತಿ ಸದಸ್ಯೆ ಡಾ.ಮೀನಾಕ್ಷಿ ಬಾಳಿ, ಕೃಷಿ ಕೂಲಿ ಕಾರ್ಮಿಕರ ಸಂಘದ ಮುಖಂಡ ಸಿದ್ಧರಾಮ ಹರವಾಳ, ನಿಂಗಣ್ಣ ಆಡಿನ್ ಕೋಳಕೂರ, ಸಿದ್ದಣ್ಣ ಹಂಗರಗಿ ಕೋಳಕೂರ ಸೇರಿದಂತೆ ಮತ್ತಿತರರು ಇದ್ದರು.







