ಕಾಂಗ್ರೆಸ್ ಯಾವಾಗಲೂ ಸಾಮಾಜಿಕ ನ್ಯಾಯದ ಪರವಾಗಿದೆ : ಸಚಿವ ಪ್ರಿಯಾಂಕ್ ಖರ್ಗೆ
ʼಕಲಬುರಗಿ ನಗರದ 31 ಉದ್ಯಾನವನ, 4 ಕೆರೆ, 23 ಸರ್ಕಲ್‌ಗಳ ಮರು ನಿರ್ಮಾಣಕ್ಕೆ ಕ್ರಮʼ

ಕಲಬುರಗಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗೆಲ್ಲ ಸಾಮಾಜಿಕ, ಆರ್ಥಿಕ ಹಾಗೂ ಸಮಾಜಿಕ ನ್ಯಾಯವನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸಿದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ನಗರದ ಪೂಜ್ಯ ಬಸವರಾಜಪ್ಪ ಅಪ್ಪಾ ಸ್ಮರಣಾರ್ಥ ಭವನದಲ್ಲಿ ನಡೆದ 935 ಪಾಲಿಕೆಯ ಪೌರಕಾರ್ಮಿಕರ ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ ಪಾಲಿಕೆಯಿಂದ ನೇರ ವೇತನ ಪಾವತಿ ಆದೇಶ ಪತ್ರ ವಿತರಣೆ, ಗ್ರಾಮ ಆಡಳಿತ ಅಧಿಕಾರಿಗಳಿಗೆ ನೇಮಕಾತಿ ಪತ್ರ ಹಾಗೂ ಕ್ರೋಮ್ ಬುಕ್ ವಿತರಣೆ, ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಚಿವರು ಸಾಂಕೇತಿಕವಾಗಿ ನೇಮಕಾತಿ ಪತ್ರ ವಿತರಿಸಿದರು. ಜೊತೆಗೆ ಹೊಲಿಗೆ ಯಂತ್ರ ಹಾಗೂ ತ್ರಿಚಕ್ರ ವಾಹನಗಳ ವಿತರಣೆ ಮಾಡಿದರು.
ʼಕಾಂಗ್ರೆಸ್ ಪಕ್ಷದ ಸಿದ್ದಾಂತ ಹಾಗೂ ಸರಕಾರದ ಬದ್ಧತೆಯಿಂದಾಗಿ ನಾವು ಇಂದು ನಿಮಗೆಲ್ಲ ನೇಮಕಾತಿ ಆದೇಶ ವಿತರಿಸಿ, ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಇಲ್ಲಿಂದ ನೀವೆಲ್ಲ ಮಹಾನಗರ ಪಾಲಿಕೆಯ ನೌಕರರಾಗಿರುತ್ತೀರಿ. ಇದು ಅತ್ಯಂತ ಸಂತೋಷದ ಕ್ಷಣವಾಗಿದೆʼ ಎಂದು ಸಚಿವರು ಹೇಳಿದರು.
ಪೌರಕಾರ್ಮಿಕರು ಇದ್ದರೆ ನಗರವೆಲ್ಲ ಸ್ವಚ್ಛತೆಯಿಂದ ಇರಲು ಸಾಧ್ಯವಾಗುತ್ತದೆ. ನಿಮ್ಮೆಲ್ಲ ಕಷ್ಟಗಳ ನಡುವೆ ನಗರವನ್ನು ಸ್ವಚ್ಛವಾಗಿಡಲು ಕೆಲಸ ಮಾಡುತ್ತಿದ್ದೀರಿ ನಿಮಗೆಲ್ಲ ಧನ್ಯವಾದಗಳು ಎಂದ ಸಚಿವರು, 64 ಗ್ರಾಮಸೇವಕರ ನೇಮಕಾತಿ ಮಾಡಿ ಗ್ರಾಮ ಸೇವಕರಿಗೆ ತಂತ್ರಾಂಶ ದಾಖಲಿಸಲು ಅನುಕೂಲವಾಗಲೆಂದು 154 ಕ್ರೊಮ್ ಬುಕ್ ವಿತರಣೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಇದೇ ಮೊದಲಬಾರಿಗೆ ಇಂತಹ ಸೌಲಭ್ಯ ಒದಗಿಸಲಾಗಿದೆ ಎಂದರು.
ಕೇಂದ್ರ ಸರಕಾರ ಕಲಬುರಗಿಯನ್ನು ಸ್ಮಾರ್ಟ್ ಸಿಟಿ ಮಾಡಲು ನಿರಾಕರಿಸಿತು. ಆದರೆ ರಾಜ್ಯ ಸರಕಾರ ಕಲಬುರಗಿಯನ್ನು ಮುಂದಿನ 25 ವರ್ಷಕ್ಕೆ ಹೇಗಿರಬೇಕೋ ಹಾಗೆ ಸುಂದರ ನಗರವನ್ನಾಗಿ ಮಾಡಲು IIHS ( Indian Institute for Human Settlements) ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಈಗಾಗಲೇ ನೀಲನಕ್ಷೆ ತಯಾರಿಸಲಾಗಿದ್ದು, ಮುಂದಿನ ಮೂರು ವರ್ಷದಲ್ಲಿ ನವ ಕಲಬುರಗಿ ನಿರ್ಮಾಣ ಮಾಡಲಾಗುವುದು ಎಂದರು.
ಇದರ ಜೊತೆಗೆ 23 ಸರ್ಕಲ್ ಗಳ ಮರುನಿರ್ಮಾಣ, 31 ಉದ್ಯಾನವನ ಅಭಿವೃದ್ದಿ ಹಾಗೂ 4 ಕೆರೆಗಳನ್ನು ಅಭಿವೃದ್ದಿಪಡಿಸಲಾಗುವುದು. ನಗರದ ಎಲ್ಲ ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಲಾಗಿದ್ದು, ಕಲಬುರಗಿಯಲ್ಲಿ ಬೇಕಾಗುವ ಅಗತ್ಯ ಮೂಲಭೂತ ಸೌಲಭ್ಯ ಸೇರಿದಂತೆ ಇತರೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುತ್ತಿದೆ ಎಂದರು.
ನಗರದ ವಾಜಪೇಯಿ ಬಡಾವಣೆಯಲ್ಲಿ "ನೈಸ್" ( NICE- Nagavi Institute of Competitive Exams) ತರಬೇತಿ ಕೇಂದ್ರವನ್ನು ಸ್ಥಾಪಿಸಲಾಗುತ್ತಿದ್ದು, ಮುಂದಿನ ಜುಲೈ ಕೊನೆಯ ವಾರದಲ್ಲಿ ಉದ್ಘಾಟನೆ ಮಾಡಲಾಗುವುದು. ಮೊದಲಿಗೆ 500 ಜನ ಐಎಎಸ್, ಕೆಎಎಸ್ ಸೇರಿದಂತೆ ಇತರೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುವ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುವುದು. ಮುಂದೆ 2,000 ಅಭ್ಯರ್ಥಿಗಳಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ ಎಂದರು.
ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು ಮಾತನಾಡಿದರು.
ವೇದಿಕೆಯ ಮೇಲೆ ಮಹಾಪೌರ ಯಲ್ಲಪ್ಪ ನಾಯಕೋಡಿ, ಲೋಕಸಭಾ ಸದಸ್ಯರಾದ ರಾಧಾಕೃಷ್ಣ ದೊಡ್ಡಮನಿ, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಕನೀಜ್ ಫಾತಿಮಾ, ತಿಪ್ಪಣ್ಣಪ್ಪ ಕಮಕನೂರು, ಬಾಬುರಾವ್ ಚಿಂಚನಸೂರು, ಕುಡಾ ಅಧ್ಯಕ್ಷ ಮಜರ್ ಆಲಂಖಾನ್, ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್, ಜಿಪಂ ಸಿಇಒ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಕಮಿಷನರ್ ಅವಿನಾಶ್ ಶಿಂಧೆ, ಸಚಿನ್ ಶಿರವಾಳ ಸೇರಿದಂತೆ ಅನೇಕರಿದ್ದರು.