ಮೀಸಲಾತಿ ವಿರೋಧಿಸಿದವರೇ ಕಾಂಗ್ರೆಸ್‍ನವರು : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ರಾಯಚೂರು: ಕಾಂಗ್ರೆಸ್‍ನ ನಾಯಕರಾದ ಜವಾಹರಲಾಲ್ ನೆಹರು ಅವರಿಂದ ರಾಜೀವ್ ಗಾಂಧಿವರೆಗೂ ಮೀಸಲಾತಿ ವಿರೋಧಿಸಿದ್ದಾರೆ. ಮೀಸಲಾತಿ ವಿರೋಧ ಮಾಡಿದ ರಾಜೀವ್ ಗಾಂಧಿಯವರ ದೊಡ್ಡ ಭಾಷಣವೇ ಇದೆ ಎಂದು ಕೇಂದ್ರದ ಗ್ರಾಹಕರ ವ್ಯವಹಾರಗಳು, ಆಹಾರ ಹಾಗೂ ನವೀಕರಿಸಬಹುದಾದ ಇಂಧನ ಖಾತೆ ಸಚಿವ ಪ್ರಹ್ಲಾದ್ ಜೋಶಿ ಅವರು ತಿಳಿಸಿದರು.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದವರಿಗೆ ಸಾಮಾಜಿಕ ಬದ್ಧತೆಯೇ ಇಲ್ಲ. ನರೇಂದ್ರ ಮೋದಿ ನೇತೃತ್ವದ 11 ವರ್ಷದ ಆಡಳಿತಾವಧಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಶೂನ್ಯ ಅಂಕ ನೀಡಿರುವುದು ತಮ್ಮ ಕುರ್ಚಿ ಉಳಿಸಿಕೊಳ್ಳಲು. ರಾಹುಲ್ ಗಾಂಧಿಯವರಿಗೆ ಝಿರೋ ಅಂಕ ಜನರು ನೀಡಿದ್ದಾರೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಿಂದಲೇ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗಿದೆ. ಎರಡು ಮೂರು ಬಾರಿ ಬೆಲೆ ಏರಿಕೆ ಮಾಡಿದ್ದಾರೆ. ಅದು ಜಿಎಸ್‍ಟಿ ಅಡಿ ಬರುವುದಿಲ್ಲ. ತೆರಿಗೆ ವಿಧಿಸಿದ್ದಾರೆ. ಗ್ಯಾರಂಟಿ ಯೋಜನೆಗೆ ಸಂಬಂಧಿಸಿದಂತೆ 48 ವಿವಿಧ ವಸ್ತುಗಳ ಬೆಲೆ ಏರಿಕೆ ಮಾಡಿದ್ದಾರೆ ಎಂದು ಆರೋಪಿಸಿದರು.
ಶಾಸಕ ಡಾ.ಶಿವರಾಜ ಪಾಟೀಲ್, ಮುಖಂಡರಾದ ತ್ರಿವಿಕ್ರಮ ಜೋಶಿ, ಗಿರೀಶ ಕನವೀಡು ಹಾಗೂ ಮತ್ತಿತರರಿದ್ದರು.





