ಕಲಬುರಗಿ | ವಿಶೇಷ ಚೇತನ ಮಕ್ಕಳು ಒಲಂಪಿಕ್ಸ್ ನಲ್ಲಿ ಭಾಗವಹಿಸಲು ಸಹಕಾರ: ಶಶಿಕಲಾ ಜೊಲ್ಲೆ

ಕಲಬುರಗಿ: ವಿಶೇಷ ಚೇತನ ಮಕ್ಕಳನ್ನು ಮುಖ್ಯ ವಾಹಿನಿಗೆ ತರುವುದು ನಮ್ಮೆಲ್ಲರ ಉದ್ದೇಶವಾಗಬೇಕು. ವಿಶೇಷ ಒಲಂಪಿಕ್ಸ್ ನಲ್ಲಿ ಕರ್ನಾಟಕ ರಾಜ್ಯದಿಂದ ಹೆಚ್ಚಿನ ವಿಶೇಷ ಚೇತನ ಮಕ್ಕಳ ಭಾಗವಹಿಸಬೇಕು. ಇದಕ್ಕೆ ಬೇಕಾದ ಎಲ್ಲಾ ಅಗತ್ಯ ಸಹಕಾರ ನೀಡಲಾಗುವುದು ಎಂದು ವಿಶೇಷ ಒಲಂಪಿಕ್ಸ್ ಕರ್ನಾಟಕದ ರಾಜ್ಯಾಧ್ಯಕ್ಷೆ ಶಶಿಕಲಾ ಜೊಲ್ಲೆ ಹೇಳಿದರು.
ಶನಿವಾರ ಕಲಬುರಗಿ ನಗರದ ಕೋಟನೂರ್ 'ಡಿ' ಗ್ರಾಮದ ಸಿದ್ಧಶ್ರೀ ಡಿವೈನ್ ಪ್ಯಾಲೇಸ್ ನಲ್ಲಿ ವಿಶೇಷ ಒಲಿಂಪಿಕ್ಸ್ ಭಾರತ- ಕರ್ನಾಟಕ ಮತ್ತು ಶ್ರೀಮತಿ ಇಂದುಮತಿ ಚಾರಿಟೇಬಲ್ ಟ್ರಸ್ಟ್ ( ಮನಸ್ವಿನಿ ವಿಶೇಷ ಮಕ್ಕಳ ಶಾಲೆ ) ಸಹಯೋಗದಲ್ಲಿ ಆಯೋಜಿಸಿದ ಯಾದಗಿರ ವಲಯ ಮಟ್ಟದ ವಿಶೇಷ ಶಿಕ್ಷಕರ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿಶೇಷ ಚೇತನ ಮಕ್ಕಳ ಏಳಿಗೆಗೆ ಶ್ರಮಿಸುವುದೇ ತಮ್ಮ ಗುರಿಯಾಗಿದೆ. ವಿಶೇಷ ಒಲಂಪಿಕ್ಸ್ ನಲ್ಲಿ ಹೆಚ್ಚಿನ ಮಕ್ಕಳು ಭಾಗವಹಿಸುವ ದೃಷ್ಠಿಯಿಂದ ರಾಜ್ಯದಾದ್ಯಂತ ಜಿಲ್ಲಾವಾರು ವಿಶೇಷ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ. ಶಿಕ್ಷಕರು ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿ ಅವರನ್ನು ವಿಶೇಷ ಒಲಿಂಪಿಕ್ಸ್ ಭಾರತ್ ಗೆ ತಯಾರಿ ಮಾಡಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಅಲ್ಲಮಪ್ರಭು ಪಾಟೀಲ, ಬಸವರಾಜ ಮತ್ತಿಮಡು, ವಿಧಾನ ಪರಿಷತ್ ಶಾಸಕರಾದ ಶಶೀಲ ಜಿ. ನಮೋಶಿ, ಡಾ. ಬಿ.ಜಿ. ಪಾಟೀಲ, ಸಾಧಿಕ ಹುಸೇನ ಖಾನ, ವಿಶೇಷ ಒಲಿಂಪಿಕ್ಸ್ ಉಪಾಧ್ಯಕ್ಷ ರೂಪ ಸಿಂಗ್, ವಲಯ ನಿರ್ದೇಶಕ ಅಮರೇಂದ್ರ ಎ., ಆನಂದ ಡಿ.ಸಿ., ಶ್ರೀಮತಿ ಇಂದುಮತಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಮೇಶ ಹತ್ತಿ, ಕಾರ್ಯದರ್ಶಿ ಸುರೇಶ್ ಹತ್ತಿ, ವಿಜಯಪುರ ಜಿಲ್ಲಾ ಆಸ್ಪತ್ರೆಯ ಕ್ಲಿನಿಕಲ್ ಸೈಕಾಲಜಿಸ್ಟ್ ಡಾ. ರೇಣುಕಾ ಬಗಾಲೆ, ಮನಸ್ವಿನಿ ಶಾಲೆಯ ಪ್ರಾಂಶುಪಾಲರಾದ ಆಶಾ ನಿಪ್ಪಾಣಿ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.







