ಧರ್ಮಕ್ಕಿಂತ ದೇಶ ದೊಡ್ಡದು, ಸಂಕಷ್ಟದ ಕಾಲದಲ್ಲಿ ಒಟ್ಟಾಗಿರೋಣ : ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ : ಯುದ್ದ ಬೇಕೋ ಅಥವಾ ಬುದ್ದನ ಶಾಂತಿ ಮಂತ್ರ ಬೇಕೋ ಎಂಬ ಸಂಕಷ್ಟದ ಸಮಯದಲ್ಲಿ ಇಂದು ನಾವಿದ್ದೇವೆ. ಸ್ವಾಭಿಮಾನಕ್ಕೆ, ದೇಶದ ಭದ್ರತೆಗೆ ಧಕ್ಕೆಯಾದಾಗ ಜಾತಿ-ಧರ್ಮ ಮೀರಿ ದೇಶ ಪ್ರೇಮ ಮೆರೆಯಬೇಕು. ಧರ್ಮಕ್ಕಿಂತ ದೇಶ ದೊಡ್ಡದು ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಸೋಮವಾರ ಕಲಬುರಗಿ ನಗರದ ಸೇಡಂ ರಸ್ತೆಯಲ್ಲಿರುವ ಬುದ್ದ ವಿಹಾರದಲ್ಲಿ ಸಿದ್ದಾರ್ಥ ವಿಹಾರ ಟ್ರಸ್ಟ್ ನಿಂದ ಆಯೋಜಿಸಿದ 2,569ನೇ ವೈಶಾಖ ಬುದ್ಧ ಪೂರ್ಣಿಮಾ ದಿನಾಚರಣೆ ಕಾರ್ಯಕ್ರಮದಲ್ಲಿ ಬುದ್ದನ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದ ನಂತರ ಉಪಾಸಕರು-ಉಪಾಸಕಿಯರು ಹಾಗೂ ಬೌದ್ಧ ಬಿಕ್ಕುಗಳನ್ನು ಉದ್ದೇಶಿಸಿ ಮಾತನಾಡಿದರು.
ದೇಶ ಉಳಿದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ, ಧರ್ಮ ಉಳಿಯಲು ಸಾಧ್ಯ. ಹೀಗಾಗಿ ಯುದ್ದೋನ್ಮಾದ ಈ ಸಂದರ್ಭದಲ್ಲಿ ದೇಶದ ಜನತೆ ಯಾವುದಕ್ಕೂ ದೃತಿಗೆಡಬಾರದು. ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಎಲ್ಲರು ಒಂದಾಗಿ ಸಂಕಷ್ಟದ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಬೇಕು ಎಂದು ಕರೆ ನೀಡಿದರು.
ಇತ್ತೀಚೆಗೆ ಜಮ್ಮು ಕಾಶ್ಮೀರ ಪೆಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದುಷ್ಕೃತ್ಯ ಘಟನೆ ನೆನೆದ ಅವರು, ಪಾಕಿಸ್ತಾನ ಕಾಲ್ಕೆರೆದು ಜಗಳ ಮಾಡುತ್ತಿದೆ. ಹಿಂದೆ 2-3 ಯುದ್ದದಲ್ಲಿ ಅವರನ್ನು ನಾವು ಸೊಲಿಸಿದ್ದೇವೆ. ನಾವು ಶಾಂತಿ ಪ್ರಿಯರು. ಯಾವುದೇ ಯುದ್ದವಾದಲ್ಲಿ ಹಾನಿಕಾರಿಕ ತಪ್ಪಿದಲ್ಲ. ಜನಜೀವನ ತೊಂದರೆ ಅನುಭವಿಸಬೇಕಾಗುತ್ತದೆ. ಕೆಲ ಪರಿಸ್ಥಿತಿಯಲ್ಲಿ ಯುದ್ದ ಅನಿವಾರ್ಯ ಎಂದರೆ ಒಪ್ಪಿಕೊಳ್ಳಲೆಬೇಕಾಗುತ್ತದೆ ಎಂದರು.
ಗಡಿಯಲ್ಲಿ ದೇಶ ಕಾಯುತ್ತಿರುವ ಸೈನಿಕರ ನಿರಂತರ ಹೋರಾಟ, ತ್ಯಾಗ ಕೊಂಡಾಡಿದ ಅವರು ಆರ್ಮಿಗೆ ದೇಶದ ಸಂಪೂರ್ಣ ಬೆಂಬಲ ಇದೆ. ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ದೇಶ ತಲೆಬಾಗುತ್ತದೆ ಎಂದು ಡಾ.ಮಲ್ಲಿಕಾರ್ಜುನ ಖರ್ಗೆ ಪುನರುಚ್ಚಿಸಿ ಸೈನಿಕರ ಕೆಚ್ಚೆದೆಯ ಹೋರಾಟ ಸ್ಮರಿಸಿದರು.
ಇದೇ ಸಂದರ್ಭದಲ್ಲಿ ಗಡಿಯಲ್ಲಿ ದೇಶದ ರಕ್ಷಣೆ ಮಾಡುತ್ತಾ ಹುತಾತ್ಮರಾದ ಸೈನಿಕರು ಮತ್ತು ಪೆಹಲ್ಗಾಂ ಘಟನೆಯಲ್ಲಿ ಜೀವ ಕಳೆದುಕೊಂಡ 26 ಜನರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷ ಮೌನಾಚರಣೆ ಮಾಡಲಾಯಿತು.
ಇದಕ್ಕೂ ಮುನ್ನ ಬೆಂಗಳೂರಿನ ಮಹಾಬೋಧಿ ಸಂಸ್ಥೆಯ ಪೂಜ್ಯ ಭಂತೇ ಧಮ್ಮದತ್ತ ಥೇರಾ ಅವರು ಬುದ್ದ ವಂದನೆ ಸಲ್ಲಿಸಿ ಪ್ರವಚನ ನೀಡಿದರು. ಡಾ.ಮಲ್ಲಿಕಾರ್ಜುನ ಖರ್ಗೆ ಮತ್ತು ರಾಧಾಬಾಯಿ ಖರ್ಗೆ ಅವರು ಬೌದ್ಧ ಬಿಕ್ಕುಗಳಿಗೆ ಸತ್ಕರಿಸಿದರು.
ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಶಾಸಕ ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಶಾಸಕರಾದ ತಿಪ್ಪಣ್ಣಪ್ಪ ಕಮಕನೂರ, ವಸಂತ ಕುಮಾರ, ಎ.ಐ.ಸಿ.ಸಿ ಕಾರ್ಯದರ್ಶಿ ಪ್ರಣವ ಝಾ., ಮಾಜಿ ಸಚಿವ ರೇವುನಾಯಕ ಬೆಳಮಗಿ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಬೌದ್ದ ಉಪಾಸಕರು, ಉಪಾಸಕಿಯರು ಭಾಗವಹಿಸಿದ್ದರು.







