Kalaburagi | ಬೀಜ-ಗೊಬ್ಬರ ಕಾಳಸಂತೆ ತಡೆಗೆ ಆಗ್ರಹಿಸಿ ಸಿಪಿಐ, ಕಿಸಾನ್ ಸಭಾ ಪ್ರತಿಭಟನೆ

ಕಲಬುರಗಿ: ಜಿಲ್ಲೆಯ ರೈತರಿಗೆ ಗುಣಮಟ್ಟದ ಬೀಜ ಮತ್ತು ರಸಗೊಬ್ಬರವನ್ನು ಸರಿಯಾದ ದರದಲ್ಲಿ ಹಾಗೂ ಸಮಯಕ್ಕೆ ಸರಿಯಾಗಿ ಪೂರೈಸಬೇಕು, ಬೀಜ-ಗೊಬ್ಬರ ಮಾರಾಟದಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐ) ಹಾಗೂ ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಜಿಲ್ಲಾ ಮಂಡಳಿಗಳ ನೇತೃತ್ವದಲ್ಲಿ ಜಂಟಿ ಕೃಷಿ ನಿರ್ದೇಶಕರ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರು ಜಂಟಿ ಕೃಷಿ ನಿರ್ದೇಶಕರಿಗೆ ಮನವಿ ಸಲ್ಲಿಸಿ, ಜಿಲ್ಲೆಯಾದ್ಯಂತ ಬೀಜ ಮತ್ತು ರಸಗೊಬ್ಬರಗಳ ಕಾಳಸಂತೆ ಹೆಚ್ಚಾಗಿದ್ದು, ರೈತರು ಸುಲಿಗೆಗೆ ಒಳಗಾಗುತ್ತಿದ್ದಾರೆ. ಕೃಷಿ ಇಲಾಖೆಯು ಈ ಅಕ್ರಮಗಳನ್ನು ತಡೆಯುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಯುದ್ಧ ಪರಿಸ್ಥಿತಿ ಹಾಗೂ ರಸಗೊಬ್ಬರ ಕೊರತೆಯ ಆತಂಕವನ್ನು ನೆಪ ಮಾಡಿಕೊಂಡು ಕೆಲ ವ್ಯಾಪಾರಿಗಳು ರೈತರನ್ನು ಶೋಷಿಸುತ್ತಿದ್ದು, ಅಗತ್ಯ ಪ್ರಮಾಣದಲ್ಲಿ ರಸಗೊಬ್ಬರ ಸಿಗದ ಕಾರಣ ರೈತರು ವ್ಯಾಪಾರಿಗಳು ನಿಗದಿಪಡಿಸುವ ಹೆಚ್ಚಿನ ಬೆಲೆಗೆ ಖರೀದಿಸುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಅಕ್ರಮ ಮಾರಾಟಗಾರರು ಕೃಷಿ ಇಲಾಖೆ ಮತ್ತು ಅಧಿಕಾರಿಗಳ ಕಣ್ತಪ್ಪಿಸಿ ಬೇನಾಮಿ ಸ್ಥಳಗಳಲ್ಲಿ ವ್ಯಾಪಾರ ನಡೆಸುತ್ತಿದ್ದು, ಜಿಲ್ಲಾಡಳಿತ ಹಾಗೂ ಸಂಬಂಧಿತ ಇಲಾಖೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಇಂತಹ ಜಾಲವನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರದ ರಸಗೊಬ್ಬರ ನೀತಿಯಿಂದ ಖಾಸಗಿ ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲವಾಗುತ್ತಿದ್ದು, ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಈ ರೈತ ವಿರೋಧಿ ನೀತಿಯನ್ನು ಕೇಂದ್ರ ಸರ್ಕಾರ ಕೈಬಿಡುವಂತೆ ಕೃಷಿ ಇಲಾಖೆ ಪತ್ರ ಬರೆದು ಒತ್ತಾಯಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹಲವು ಬೇಡಿಕೆಗಳನ್ನು ಮುಂದಿಟ್ಟ ಪ್ರತಿಭಟನಾಕಾರರು, ಜಿಲ್ಲೆಯ ಎಲ್ಲ ರೈತರಿಗೆ ಅಗತ್ಯ ಪ್ರಮಾಣದ ಗುಣಮಟ್ಟದ ಬೀಜ ಮತ್ತು ರಸಗೊಬ್ಬರ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು, ರೈತ ಸಂಪರ್ಕ ಕೇಂದ್ರಗಳ ಮೂಲಕ ಮಾರಾಟ ವ್ಯವಸ್ಥೆ ಬಲಪಡಿಸಬೇಕು, ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ವ್ಯಾಪಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಹಾಗೂ ಅವರ ಪರವಾನಗಿಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಅಲ್ಲದೆ, ಪ್ರತಿಯೊಂದು ಬೀಜ ಮತ್ತು ರಸಗೊಬ್ಬರ ಮಾರಾಟ ಮಳಿಗೆಯ ಮುಂದೆ ದರಪಟ್ಟಿ ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಬೇಕು, ರೈತರಲ್ಲಿ ಅರಿವು ಮೂಡಿಸಲು ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು, ಅನಧಿಕೃತ ಮಾರಾಟ ಜಾಲವನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು ಹಾಗೂ ಕೃಷಿ ಪರಿಕರಗಳನ್ನು ಸಬ್ಸಿಡಿ ದರದಲ್ಲಿ ವಿತರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಮಹೇಶ್ ಕುಮಾರ್ ರಾಠೋಡ್, ಮೌಲಾ ಮುಲ್ಲಾ, ಭೀಮಾಶಂಕರ ಮಾಡಿಯಾಳ, ಪ್ರಭುದೇವ ಯಳಸಂಗಿ, ಸಿದ್ದಪ್ಪ ಫಾಲ್ಕಿ, ಪದ್ಮಾವತಿ ಪಾಟೀಲ್, ಮಹಮ್ಮದ್ ಚೌಧರಿ, ಸಾಜಿದ್ ಅಹ್ಮದ್, ಶಿವಲಿಂಗಮ್ಮ ಲೇಂಗಟಿಕರ್, ಭೀಮರಾಯ, ಸಿದ್ದಣ್ಣ ಕನ್ನೂರ ಸೇರಿದಂತೆ ಹಲವರು ಭಾಗವಹಿಸಿದ್ದರು.






