ಪ್ರವಾಹದಿಂದ ಬೆಳೆ ಹಾನಿ | 2 ಸಾವಿರ ಕೋಟಿಗೂ ಹೆಚ್ಚು ಪರಿಹಾರಕ್ಕೆ ಕ್ರಮ : ಸಿಎಂ ಸಿದ್ದರಾಮಯ್ಯ

ಸಿದ್ದರಾಮಯ್ಯ
ಕಲಬುರಗಿ: ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದೆಲ್ಲೆಡೆ ಪ್ರಾಥಮಿಕ ಅಂದಾಜು ಪ್ರಕಾರ ಸುಮಾರು 9,60,578 ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ಕೂಡಲೇ ಎನ್ಡಿಆರ್ಎಫ್ ಅಡಿಯಲ್ಲಿ ಸೇರಿದಂತೆ ರಾಜ್ಯದ ವಿಶೇಷ ಅನುದಾನ ಸೇರಿಸಿ ಸುಮಾರು 2000-2500 ಕೋಟಿಗೂ ಹೆಚ್ಚು ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ಇಲ್ಲಿನ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕದ 8 ಜಿಲ್ಲೆಗಳಲ್ಲೇ ಶೇ.95 ರಷ್ಟು ಬೆಳೆ ಹಾನಿಗೀಡಾಗಿದೆ. ಈಗಾಗಲೇ ಪರಿಹಾರ ನೀಡುತ್ತಾ ಬಂದಿದ್ದು, ಇನ್ನುಳಿದ ನಷ್ಟದ ಕುರಿತಾಗಿ ಹಂತ ಹಂತವಾಗಿ ಪರಿಹಾರ ನೀಡಲಾಗುತ್ತದೆ ಎಂದರು.
ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಈ ವರ್ಷ ಹಿಂದೆಂದೂ ಕಾಣದ ಪ್ರಮಾಣದಲ್ಲಿ ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ ಸರಾಸರಿ 472 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, ಈ ವರ್ಷ 576 ಮಿ.ಮೀ.ಗಳಷ್ಟು ಅಂದರೆ ಶೇ.22 ರಷ್ಟು ಹೆಚ್ಚಿನ ಮಳೆಯಾಗಿದೆ. ಅಲ್ಲದೆ, ಮಹಾರಾಷ್ಟ್ರದಿಂದ ವಿವಿಧ ನದಿ, ಜಲಾಶಯಗಳಿಂದ ಹೆಚ್ಚಿನ ನೀರು ಬಿಟ್ಟಿರುವುದರಿಂದ ವಿಜಯಪುರ, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಈ ಜಿಲ್ಲೆಗಳಲ್ಲಿ ಒಟ್ಟಾರೆ 117 ಗ್ರಾಮಗಳು ಪ್ರವಾಹಪೀಡಿತವಾಗಿದ್ದು, 80 ಕಾಳಜಿ ಕೇಂದ್ರಗಳನ್ನು ಸ್ಥಾಪಿಸಿ, 10,576 ಮಂದಿಯನ್ನು ಆರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
NDRF ನಿಯಮದ ಪ್ರಕಾರ ಕುಷ್ಕಿ ಜಮೀನಿಗೆ ಹೆಕ್ಟೇರ್ ಗೆ 8,500 ರೂ., ನೀರಾವರಿ ಜಮೀನಿಗೆ ಹೆಕ್ಟೇರ್ ಗೆ 17 ಸಾವಿರ ರೂ., ಬಹು ವಾರ್ಷಿಕ ಬೆಳೆಗೆ 22,500 ರೂ. ಇದೆ. ಈ NDRF ಹಣದ ಜೊತೆಗೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಪ್ರತೀ ಹೆಕ್ಟೇರ್ ಗೆ 8,500 ರೂ. ಪರಿಹಾರ ಕೊಡಲಿದೆ. ಕುಷ್ಕಿ ಜಮೀನಿಗೆ ಹೆಕ್ಟೇರ್ ಗೆ 8,500ರೂ.+8,500 ರೂ. ಸೇರಿ ಒಟ್ಟು 17,000 ರೂ., ನೀರಾವರಿ ಜಮೀನಿಗೆ 17,000 ರೂ. + 8,500 ರೂ. ಸೇರಿ ಒಟ್ಟು 25,500 ರೂ., ಬಹುವಾರ್ಷಿಕ ಬೆಳೆಗೆ ಹೆಕ್ಟೇರ್ ಗೆ 22,500 ರೂ. + 8,500 ರೂ. ಸೇರಿ ಒಟ್ಟು 31,000 ಸಾವಿರ ರೂ. ರೈತರಿಗೆ ನೀಡಲಾಗುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ 10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿರುವ ಅಂದಾಜಿದೆ. ಈ ಪ್ರಮಾಣ ಇನ್ನೂ ಹೆಚ್ಚು ಆಗಬಹುದು. ಜಂಟಿ ಸಮೀಕ್ಷೆ ಪೂರ್ಣ ಆದ ಬಳಿಕ ಸ್ಪಷ್ಟವಾಗಿ ಗೊತ್ತಾಗುತ್ತದೆ. ಸದ್ಯ 5 ಲಕ್ಷ ಹೆಕ್ಟೇರ್ ನಲ್ಲಿ ಮಾತ್ರ ಜಂಟಿ ಸಮೀಕ್ಷೆ ಮುಗಿದಿದ್ದು, ಸಮೀಕ್ಷೆ ಪೂರ್ಣಗೊಂಡ ತಕ್ಷಣ ಹಣ ಅವರ ಖಾತೆಗಳಿಗೆ ವರ್ಗಾವಣೆ ಮಾಡಲಾಗುತ್ತದೆ. ಪರಿಹಾರ ಹಣ ಇದಕ್ಕಿಂತಲೂ ಮುಂದೆ ಹೆಚ್ಚಳ ಕೂಡ ಆಗಬಹುದು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಜೂ.1ರಿಂದ ಈವರೆಗೆ ಮಳೆ ಹಾನಿಯಿಂದಾಗಿ 52 ಮಂದಿ ಮೃತಪಟ್ಟಿದ್ದಾರೆ. ಸೆ.8 ರವರೆಗಿನ ಮೃತಪಟ್ಟವರಿಗೆ ಪರಿಹಾರ ನೀಡಲಾಗಿದೆ. ಗೋಡೆ ಕುಸಿದು 15 ಮಂದಿ, ನೀರಿನಲ್ಲಿ ಮುಳಗಿ ಅಥವಾ ಕೊಚ್ಚಿ ಹೋಗಿ 23 ಮಂದಿ ನಿಧನರಾಗಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಒಟ್ಟು 422 ಜಾನುವಾರುಗಳು ಮರಣ ಹೊಂದಿವೆ. ಇದರಲ್ಲಿ ಯಾದಗಿರಿ ಜಿಲ್ಲೆ ಒಂದರಲ್ಲೇ 245 ಜಾನುವಾರುಗಳು ಮೃತಪಟ್ಟಿದ್ದು, ಕಲಬುರಗಿ 27, ವಿಜಯಪುರದಲ್ಲಿ 3, ಬೀದರ್ ನಲ್ಲಿ 38 ಜಾನುವಾರುಗಳು ಮರಣ ಹೊಂದಿವೆ. ಈ ಪೈಕಿ 407 ಜಾನುವಾರುಗಳ ಮಾಲಕರಿಗೆ ಪರಿಹಾರ ನೀಡಲಾಗಿದೆ ಎಂದು ವಿವರಿಸಿದರು.
547 ಮನೆಗಳು ಪೂರ್ಣ ಪ್ರಮಾಣದಲ್ಲಿ ಹಾನಿಗೊಳಗಾಗಿವೆ. ಇವುಗಳಿಗೆ ತಲಾ 1.20 ಲಕ್ಷ ರೂ. ಪರಿಹಾರ ನೀಡಲಾಗಿದೆ. ಅನಧಿಕೃತವಾಗಿ ನಿರ್ಮಿಸಿದ್ದ 62 ಮನೆಗಳಿಗೆ ತಲಾ ಒಂದು ಲಕ್ಷ ರೂ., ಭಾಗಶಃ ಹಾನಿಯಾದ ಮನೆಗಳು (ಶೇ.50 ರಿಂದ 75). ಇವುಗಳಿಗೆ ತಲಾ 50 ಸಾವಿರ ರೂ.ಗಳ ಪರಿಹಾರ ವಿತರಿಸಲಾಗಿದೆ ಎಂದರು.
ಶೇ.15ರಿಂದ 20ರಷ್ಟು ಹಾನಿಯಾಗಿದ್ದ 3,881 ಮನೆಗಳಿಗೆ 6,500 ರೂ. ಪ್ರಕಾರ ಪರಿಹಾರ ನೀಡಲಾಗಿದ್ದು, ಒಟ್ಟಾರೆ ಇದುವರೆಗೆ 23.12 ಕೋಟಿ ರೂ. ಗಳನ್ನು ಪರಿಹಾರವಾಗಿ ಮನೆಗಳನ್ನು ಕಳೆದುಕೊಂಡವರಿಗೆ ಕೊಡಲಾಗಿದೆ ಎಂದರು.
ಪ್ರವಾಹದ ಪರಿಣಾಮವಾಗಿ ಬಟ್ಟೆ ಮತ್ತು ಗೃಹ ಬಳಕೆ ವಸ್ತುಗಳನ್ನು ಕಳೆದುಕೊಂಡ 4,858 ಕುಟುಂಬಗಳಿಗೆ ಈವರೆಗೆ 2.42 ಕೋಟಿ ರೂ. ಗಳ ಪರಿಹಾರ ನೀಡಲಾಗಿದ್ದು, ರಸ್ತೆ, ಸೇತುವೆ ಮುಂತಾದವುಗಳ ಸಮೀಕ್ಷೆ ಕಾರ್ಯ ನಡೆಯುತ್ತಿದೆ. ಸಮೀಕ್ಷೆ ಪೂರ್ಣಗೊಂಡು ವರದಿ ಬಂದ ಕೂಡಲೇ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಪ್ರತಿ ಕ್ಷೇತ್ರಕ್ಕೆ ವಿಶೇಷ ಅನುದಾನದ ರೂಪದಲ್ಲಿ 25 ರಿಂದ 50 ಕೋಟಿ ರೂ. ನೀಡಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡ, ಕೃಷಿ ಸಚಿವ ಚೆಲುವರಾಯ್ ಸ್ವಾಮಿ, ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಶರಣಪ್ರಕಾಶ್ ಪಾಟೀಲ್, ಶರಣಬಸಪ್ಪ ದರ್ಶನಾಪುರ, ಎಂ.ಬಿ.ಪಾಟೀಲ್, ಈಶ್ವರ್ ಖಂಡ್ರೆ, ರಹೀಮ್ ಖಾನ್, ಕೆಕೆ ಆರ್ ಡಿಬಿ ಅಧ್ಯಕ್ಷ ಅಜಯ್ ಸಿಂಗ್, ಅಲ್ಲಮಪ್ರಭು ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ್, ಜಗದೇವ ಗುತ್ತೇದಾರ್, ಚಂದ್ರಶೇಖರ್ ಪಾಟೀಲ್, ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್, ಇತರೆ ಜಿಲ್ಲೆಗಳ ಜಿಲ್ಲಾಧಿಕಾರಿ ಸೇರಿದಂತೆ ಅನೇಕ ಅಧಿಕಾರಿಗಳು ಇದ್ದರು.
ರಾಜ್ಯದಲ್ಲಿ ಪ್ರವಾಹ ಪೀಡಿತರಿಗೆ ಹೆಚ್ಚಿನ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮಾನವಿ ಸಲ್ಲಿಸಲಾಗುತ್ತದೆ. ಇದಕ್ಕೆ ಕೇಂದ್ರ ಸ್ಪಂದಿಸಲೇಬೇಕಾಗುತ್ತದೆ. ಸುಮಾರು 2,000 ಕೋಟಿ ರೂ. ಪರಿಹಾರಕ್ಕೆ ಮನವಿ ನೀಡಲು ಸರ್ಕಾರದಿಂದ ನಿಯೋಗ ಹೊರಡಲಿದ್ದು, ಅನುದಾನ ಬಿಡುಗಡೆಗೆ ಪ್ರಧಾನ ಮಂತ್ರಿ, ಕೃಷಿ, ಹಣಕಾಸು ಸಚಿವರನ್ನು ಭೇಟಿಯಾಗಿ ಒತ್ತಾಯಿಸಲಾಗುವುದು.
-ಸಿದ್ದರಾಮಯ್ಯ (ಮುಖ್ಯಮಂತ್ರಿ)
ಬೇಸಿಗೆ ಅವಧಿಯಲ್ಲಿ ಮಹಾರಾಷ್ಟ್ರದಿಂದ ಭೀಮಾ ನದಿಗೆ ನೀರು ಹರಿಬಿಡುವ ವಿಚಾರವಾಗಿ ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತನಾಡಲಾಗುವುದು. ಈ ವಿಚಾರವಾಗಿ ಈಗಾಗಲೇ ಕೇಂದ್ರ ಜಲ ಮಂಡಳಿಯಲ್ಲಿ ಚರ್ಚೆಯಲ್ಲಿದೆ. ಸರ್ಕಾರ ಕಾನೂನಾತ್ಮಕವಾಗಿ ಹೆಜ್ಜೆ ಇಡಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಇದೇ ವೇಳೆಯಲ್ಲಿ ಮಧ್ಯಪ್ರವೇಶಿಸಿದ ಸಚಿವ ಎಂ.ಬಿ.ಪಾಟೀಲ್, ಬಚಾವತ್ ಆಯೋಗದ ಪ್ರಕಾರ ನೀರು ಬಿಡುಗಡೆಗೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಉತ್ತರಿಸಿದರು.







