585.72 ಕೋಟಿ ರೂ. ಬೆಳೆ ವಿಮೆ ಪರಿಹಾರ ಮಂಜೂರು: ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ : 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ 3,00,952 ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಸಿಕೊಂಡಿದ್ದು, ಸರ್ಕಾರದಿಂದ ಒಟ್ಟು 585.72 ಕೋಟಿ ರೂ. ಬೆಳೆ ವಿಮೆ ಪರಿಹಾರ ಮಂಜೂರಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, 2,87,696 ರೈತರಿಗೆ ಒಟ್ಟು 243.52 ಕೋಟಿ ರೂ. ಬೆಳೆ ವಿಮೆ ಪರಿಹಾರದ ಮೊದಲ ಕಂತು ಈಗಾಗಲೇ ಜಮೆಯಾಗಿದೆ ಎಂದು ತಿಳಿಸಿದರು. ಇದರಲ್ಲಿ ಬೆಳೆ ಮಧ್ಯಂತರ ಪರಿಹಾರ (Mid-Season Adversity) ಯೋಜನೆಯಡಿ 2,67,133 ರೈತರಿಗೆ 234.73 ಕೋಟಿ ರೂ. ಹಾಗೂ ಸ್ಥಳೀಯ ವಿಕೋಪ (Localized Calamity) ಯೋಜನೆಯಡಿ 20,563 ರೈತರಿಗೆ 8.79 ಕೋಟಿ ರೂ. ಪಾವತಿಸಲಾಗಿದೆ.
ಬೆಳೆ ವಿಮೆ ಪರಿಹಾರದ ಎರಡನೇ ಕಂತಿನ 221 ಕೋಟಿ ರೂ. ಪೈಕಿ 54 ಕೋಟಿ ರೂ. ಈಗಾಗಲೇ ಬಿಡುಗಡೆಯಾಗಿದ್ದು, ಕೆಲವೇ ದಿನಗಳಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ ಜಮೆಯಾಗಲಿದೆ. ಉಳಿದ 167 ಕೋಟಿ ರೂ. ಯನ್ನೂ ಹಂತ ಹಂತವಾಗಿ ಬಿಡುಗಡೆ ಮಾಡುವ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
2025ರ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದ ಜಿಲ್ಲೆಯಲ್ಲಿ 3.24 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಗೊಳಗಾಗಿತ್ತು. ಇದರ ಹಿನ್ನೆಲೆಯಲ್ಲಿ 3,26,183 ರೈತರಿಗೆ ಒಟ್ಟು 498.73 ಕೋಟಿ ರೂ. ಬೆಳೆ ಹಾನಿ ಪರಿಹಾರವನ್ನು ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಮಾರ್ಗಸೂಚಿಯಡಿ 250 ಕೋಟಿ ರೂ. ಹಾಗೂ ರಾಜ್ಯ ಸರ್ಕಾರದ ವಿಶೇಷ ಪ್ಯಾಕೇಜ್ (State Top-Up) ಅಡಿಯಲ್ಲಿ 248.73 ಕೋಟಿ ರೂ. ಸೇರಿದಂತೆ ಒಟ್ಟು 498.73 ಕೋಟಿ ರೂ. ಬೆಳೆ ಹಾನಿ ಪರಿಹಾರ ನೀಡಲಾಗಿದೆ ಎಂದು ವಿವರಿಸಿದರು.
ಒಟ್ಟಾರೆ, 2025-26ನೇ ಸಾಲಿನಲ್ಲಿ ಕಲಬುರಗಿ ಜಿಲ್ಲೆಯ ರೈತರಿಗೆ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಪರಿಹಾರ, ರಾಜ್ಯ ಸರ್ಕಾರದ ವಿಶೇಷ ಪ್ಯಾಕೇಜ್ ಹಾಗೂ ಬೆಳೆ ವಿಮೆ ಪರಿಹಾರ ಸೇರಿ ಒಟ್ಟು 1,084.45 ಕೋಟಿ ರೂ. ನೆರವು ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.






