ಕಲಬುರಗಿ| ದಲಿತ ವಿದ್ಯಾರ್ಥಿನಿಯ ಆತ್ಮಹತ್ಯೆ ಪ್ರಕರಣ; ಸಮಗ್ರ ತನಿಖೆಗೆ ವಿವಿಧ ಸಂಘಟನೆಗಳಿಂದ ಆಗ್ರಹ

ಕಲಬುರಗಿ: ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ದಲಿತ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಎನ್ನಲಾಗಿರುವ ಪ್ರಕರಣದ ಕುರಿತಾಗಿ ಗುರುವಾರ ರಾತ್ರಿ ಆಳಂದ ತಾಲ್ಲೂಕಿನ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ಕುರಿತಂತೆ ಸಮಗ್ರ ತನಿಖೆ ನಡೆಯಬೇಕೆಂದು ಹಲವು ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.
ಒಡಿಶಾ ರಾಜ್ಯದ ಅನಗುಲ್ ಮೂಲದ ನಿವಾಸಿಯಾಗಿರುವ ಮೃತ ವಿದ್ಯಾರ್ಥಿನಿ ಜಯಶ್ರೀ ನಾಯಕ್(28)ಳ ತಂದೆ ದುರ್ಯೋಧನ ನಾಯಕ್ ಅವರು ನೀಡಿರುವ ದೂರಿನ ಮೇರೆಗೆ ನರೋಣಾ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್ ಸಂಖ್ಯೆ 17/2025 ಕಲಂ 194(3)(iv) ಬಿಎನ್ಎಸ್ಎಸ್ ಕಾಯ್ದೆ 2023ಯಡಿ ಪ್ರಕರಣ ದಾಖಲಾಗಿದೆ.
ಭೂಗರ್ಭ ಶಾಸ್ತ್ರ ವಿಜ್ಞಾನ ಪದವಿ ವಿಭಾಗದಲ್ಲಿ 5ನೇ ಸೆಮಿಸ್ಟರ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ ಜಯಶ್ರೀ ನಾಯಕ್ ಎಂಬ ವಿದ್ಯಾರ್ಥಿನಿ ಆವರಣದಲ್ಲಿರುವ ಯಮುನಾ ವಸತಿ ನಿಲಯದ ಕೋಣೆಯಲ್ಲಿ ಫ್ಯಾನಿಗೆ ನೇಣು ಬಿಗಿದ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಎನ್ನಲಾಗಿರುವ ಪ್ರಕರಣ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಹಾಗಾಗಿ ಕೆಲವು ಸಂಘಟನೆಗಳ ಮುಖಂಡರುಗಳು ಸೂಕ್ತ ತನಿಖೆ ನಡೆಸುವಂತೆ ರಾಜ್ಯ ಹಾಗೂ ಕೇಂದ್ರ ಸರಕಾರಗಳಿಗೆ ಒತ್ತಾಯಿಸುತ್ತಿದ್ದಾರೆ.
ಕುಲಪತಿ, ಕುಲಸಚಿವ, ಸಿಬ್ಬಂದಿ ವಿರುದ್ಧ ತನಿಖೆಗೆ ಆಗ್ರಹ:
ಸಿಯುಕೆಯ ವಸತಿ ನಿಲಯದಲ್ಲಿ ದಲಿತ ಪ್ರತಿಭಾವಂತ ವಿದ್ಯಾರ್ಥಿನಿಯ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗೆ ಸಂಬಂಧಿಸಿದಂತೆ ಹಲವು ಅನುಮಾನಗಳು ಇವೆ. ಕೂಡಲೇ ಉನ್ನತ ತನಿಖೆ ನಡೆಸಬೇಕು ಹಾಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಯ ಕುಲಪತಿ, ಕುಲಸಚಿವ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಸೇರಿದಂತೆ ಇತರೆ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಸಿಯುಕೆಯ ವಿದ್ಯಾರ್ಥಿ ಸಂಘಟನೆಗಳು, ದಲಿತ ಸಂಘರ್ಷ ಸಮಿತಿ, ಜನವಾದಿ ಮಹಿಳಾ ಸಂಘಟನೆ, ಎಸ್ಎಫ್ಐ, ಅಂಬೇಡ್ಕರ್ ಸಂಘಟನೆ, ಡಿವೈಎಫ್ಐ ಸಂಘಟನೆ ಸೇರಿದಂತೆ ಇನ್ನಿತರ ದಲಿತ, ಪ್ರಗತಿಪರ, ಸಾಮಾಜಿಕ, ಮಹಿಳಾ ಪರ ಸಂಘಟನೆಗಳ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.







