ಅತ್ಯಾಚಾರ ಪ್ರಕರಣದಲ್ಲಿ ಗಲ್ಲು ಶಿಕ್ಷೆ ತೀರ್ಪು ಸ್ವಾಗತಾರ್ಹ: ಜನವಾದಿ ಮಹಿಳಾ ಸಂಘಟನೆ

ಕಲಬುರಗಿ: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿರುವ ಪೋಕ್ಸೊ ವಿಶೇಷ ನ್ಯಾಯಾಲಯದ ತೀರ್ಪನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಕಲಬುರಗಿ ಜಿಲ್ಲಾ ಸಮಿತಿ ಸ್ವಾಗತಿಸಿದೆ.
2025ರ ಅಕ್ಟೋಬರ್‌ನಲ್ಲಿ ಮೈಸೂರು ದಸರಾ ಜಾತ್ರೆಯ ಸಂದರ್ಭದಲ್ಲಿ ಕಲಬುರಗಿ ಜಿಲ್ಲೆಯ ಬಡ ಕುಟುಂಬವೊಂದು ಬಲೂನ್ ವ್ಯಾಪಾರಕ್ಕಾಗಿ ಮೈಸೂರಿಗೆ ತೆರಳಿತ್ತು. ದಸರಾ ಮುಗಿಸಿ ಕಲಬುರಗಿಗೆ ಮರಳಲು ಸಿದ್ಧವಾಗಿದ್ದ ಸಂದರ್ಭದಲ್ಲಿ, ಅಕ್ಟೋಬರ್ 9ರ ರಾತ್ರಿ ತಂದೆಯ ಪಕ್ಕದಲ್ಲಿ ಮಲಗಿದ್ದ 10 ವರ್ಷದ ಬಾಲಕಿಯನ್ನು ಕಾರ್ತಿಕ್ (31) ಎಂಬಾತ ಅಪಹರಿಸಿ, ಅತ್ಯಾಚಾರ ಎಸಗಿ ಕೊಲೆಗೈದಿದ್ದ. ಬಳಿಕ ಬಾಲಕಿಯ ಶವವನ್ನು ಚರಂಡಿಯಲ್ಲಿ ಎಸೆದು ಹೋಗಿದ್ದ ಈ ಘಟನೆ ತೀವ್ರ ಆಘಾತ ಮೂಡಿಸಿತ್ತು.
ಈ ಅಮಾನವೀಯ ಘಟನೆಯನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ತೀವ್ರವಾಗಿ ಖಂಡಿಸಿತ್ತು. ಅಲ್ಲದೆ, ಆರೋಪಿಗೆ ಪೋಕ್ಸೊ ಕಾಯ್ದೆಯಡಿ ಕಠಿಣ ಶಿಕ್ಷೆ ವಿಧಿಸುವ ಮೂಲಕ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿತ್ತು. ಇದೀಗ ನ್ಯಾಯಾಲಯ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿರುವುದನ್ನು ಸಂಘಟನೆ ಸ್ವಾಗತಿಸುತ್ತದೆ ಎಂದು ಸಂಘಟನೆಯ ಜಿಲ್ಲಾ ಅಧ್ಯಕ್ಷೆ ಪದ್ಮಿನಿ ಕಿರಣಗಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಇತ್ತೀಚೆಗೆ ನಡೆದಿರುವ ಹಲವು ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಲ್ಲಿಯೂ ಸಂತ್ರಸ್ತ ಕುಟುಂಬಗಳಿಗೆ ಸರ್ಕಾರ ಶೀಘ್ರ ನ್ಯಾಯ ಒದಗಿಸಬೇಕು. ಮುಂಬರುವ ಮೈಸೂರು ದಸರಾ ಜಾತ್ರೆಯ ಸಂದರ್ಭದಲ್ಲಿ ವ್ಯಾಪಾರಕ್ಕಾಗಿ ಆಗಮಿಸುವವರಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವುದರ ಜತೆಗೆ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.






