ಕಲಬುರಗಿ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ: ಗುಳಪ್ಪಗೌಡ ಪಾಟೀಲ್

ಕಲಬುರಗಿ: ಮುಂಗಾರು ಮಳೆ ಸಂಪೂರ್ಣವಾಗಿ ಕೈಕೊಟ್ಟ ಪರಿಣಾಮ ಜಿಲ್ಲೆಯ ರೈತರು ಹಾಗೂ ಕೃಷಿ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಕಲಬುರಗಿ ಜಿಲ್ಲೆಯನ್ನು ತಕ್ಷಣವೇ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಗುಳಪ್ಪಗೌಡ ಎಸ್. ಪಾಟೀಲ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಾದ್ಯಂತ ಮಳೆಯ ತೀವ್ರ ಕೊರತೆಯಿಂದ ಬೆಳೆಗಳು ಒಣಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ತಳ್ಳಲ್ಪಟ್ಟಿದ್ದಾರೆ. ಕೃಷಿ ಕಾರ್ಮಿಕರಿಗೆ ಉದ್ಯೋಗದ ಕೊರತೆ ಉಂಟಾಗಿ ಜೀವನೋಪಾಯವೇ ದುಸ್ತರವಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಕೂಡಲೇ ಜಿಲ್ಲೆಯ ಬರ ಪರಿಸ್ಥಿತಿಯನ್ನು ಅಧಿಕೃತವಾಗಿ ಘೋಷಿಸಿ, ರೈತರ ನೆರವಿಗೆ ವಿಶೇಷ ಪರಿಹಾರ ಪ್ಯಾಕೇಜ್ ಪ್ರಕಟಿಸಬೇಕು. ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಸಮರ್ಪಕ ಪರಿಹಾರ ನೀಡುವುದರ ಜೊತೆಗೆ ಕೃಷಿ ಕಾರ್ಮಿಕರಿಗೂ ಅಗತ್ಯ ನೆರವು ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದೇ ವೇಳೆ, 2025–26ನೇ ಸಾಲಿನ ಬೆಳೆ ವಿಮೆ ಪರಿಹಾರದ ಬಾಕಿ ಹಣವನ್ನು ಸರ್ಕಾರ ಇನ್ನೂ ಬಿಡುಗಡೆ ಮಾಡಿಲ್ಲ. ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ಯಾವುದೇ ವಿಳಂಬವಿಲ್ಲದೆ ಬಾಕಿ ಇರುವ ಬೆಳೆ ವಿಮೆ ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ರೈತರ ಹಿತದೃಷ್ಟಿಯಿಂದ ಸರ್ಕಾರ ತುರ್ತು ಕ್ರಮ ಕೈಗೊಂಡು, ಜಿಲ್ಲೆಯ ಜನರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸಬೇಕು ಎಂದು ಗುಳಪ್ಪಗೌಡ ಎಸ್. ಪಾಟೀಲ್ ಮನವಿ ಮಾಡಿದ್ದಾರೆ.






