ಕಲಬುರಗಿಯನ್ನು ಪ್ರಾದೇಶಿಕ ಉಪರಾಜಧಾನಿಯನ್ನಾಗಿ ಅಭಿವೃದ್ಧಿಪಡಿಸಲು ದೀಪಕನಾಗ ಪುಣ್ಯಶೆಟ್ಟಿ ಆಗ್ರಹ

ಕಲಬುರಗಿ: ನೀತಿ ಆಯೋಗದ ಶಿಫಾರಸಿನಂತೆ ರಾಜ್ಯ ಸರ್ಕಾರವು ಕಲ್ಯಾಣ ಕರ್ನಾಟಕದ ವಿಭಾಗೀಯ ಕೇಂದ್ರವಾದ ಕಲಬುರಗಿಯನ್ನು ರಾಜ್ಯದ ಪ್ರಾದೇಶಿಕ ಉಪರಾಜಧಾನಿ ಹಾಗೂ ದ್ವಿತೀಯ ಆಡಳಿತ ಕೇಂದ್ರವಾಗಿ ಅಭಿವೃದ್ಧಿಪಡಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ದೀಪಕನಾಗ ಪುಣ್ಯಶೆಟ್ಟಿ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಆಡಳಿತಾತ್ಮಕ ಚಟುವಟಿಕೆಗಳನ್ನು ವಿಕೇಂದ್ರೀಕರಿಸುವ ಅಗತ್ಯವಿದೆ ಎಂದರು.
ಬೆಂಗಳೂರು ನಂತರ ರಾಜ್ಯದ ಪ್ರಮುಖ ಆಡಳಿತ ಕೇಂದ್ರವಾಗಿ ಕಲಬುರಗಿಯನ್ನು ಅಭಿವೃದ್ಧಿಪಡಿಸಿದರೆ, ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ವಿವಿಧ ಸರ್ಕಾರಿ ಸೇವೆಗಳು ಮತ್ತಷ್ಟು ಸುಲಭವಾಗಿ ದೊರೆಯಲಿವೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕದ ಅಭಿವೃದ್ಧಿ, ಶಿಕ್ಷಣ, ಉದ್ಯೋಗ, ನೀರಾವರಿ, ಆರೋಗ್ಯ, ಸಾಮಾಜಿಕ ನ್ಯಾಯ ಹಾಗೂ ಸಾರ್ವಜನಿಕ ಸೇವಾ ಕ್ಷೇತ್ರಗಳಿಗೆ ಕೊಡುಗೆ ನೀಡಿದ ಹಿರಿಯ ನಾಯಕರ ಹೆಸರನ್ನು ಈ ಭಾಗದ ಪ್ರಮುಖ ಸರ್ಕಾರಿ ಸಂಸ್ಥೆಗಳು, ಕಟ್ಟಡಗಳು ಹಾಗೂ ಸಾರ್ವಜನಿಕ ಮೂಲಸೌಕರ್ಯಗಳಿಗೆ ನಾಮಕರಣ ಮಾಡಬೇಕು ಎಂದು ಅವರು ಮನವಿ ಮಾಡಿದರು. ಈ ಸಂಬಂಧ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ದಿವಂಗತ ಎನ್. ಧರ್ಮಸಿಂಗ್, ಮಾಜಿ ಮುಖ್ಯಮಂತ್ರಿ ದಿವಂಗತ ವೀರೇಂದ್ರ ಪಾಟೀಲ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಾಜಿ ರಾಷ್ಟ್ರೀಯ ಅಧ್ಯಕ್ಷ ದಿವಂಗತ ಡಾ. ಭೀಮಣ್ಣ ಖಂಡ್ರೆ ಅವರ ಹೆಸರನ್ನು ಪ್ರಸ್ತಾಪಿಸಿದರು.
ರಾಜಧಾನಿ ಬೆಂಗಳೂರಿನ ವಿಧಾನಸೌಧ ಮತ್ತು ಬೆಳಗಾವಿಯ ಸುವರ್ಣಸೌಧ ಮಾದರಿಯಲ್ಲಿ ಕಲಬುರಗಿಯಲ್ಲಿ ‘ಕಲ್ಯಾಣ ಕರ್ನಾಟಕ ಪ್ರಜಾಸೇವಾ ಸೌಧ’ ನಿರ್ಮಿಸಿ, ಪ್ರತಿವರ್ಷ ವಿಧಾನಮಂಡಲದ ಮಳೆಗಾಲದ ಅಧಿವೇಶನವನ್ನು ಇಲ್ಲಿ ನಡೆಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಇದರಿಂದ ಕಲ್ಯಾಣ ಕರ್ನಾಟಕ ಭಾಗದ ಸಮಸ್ಯೆಗಳು, ಅಭಿವೃದ್ಧಿ ಯೋಜನೆಗಳು ಹಾಗೂ ಜನರ ಬೇಡಿಕೆಗಳು ವಿಧಾನಮಂಡಲದಲ್ಲಿ ಹೆಚ್ಚಿನ ಚರ್ಚೆಗೆ ಬರಲಿವೆ ಎಂದು ಅವರು ಅಭಿಪ್ರಾಯಪಟ್ಟರು.
ಸೆಪ್ಟೆಂಬರ್ 17ರಂದು ಕಲಬುರಗಿಯಲ್ಲಿ ನಡೆದ 79ನೇ ಕಲ್ಯಾಣ ಕರ್ನಾಟಕ ಉತ್ಸವದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಘೋಷಿಸಿದ ‘ನವ ಕಲ್ಯಾಣ ಕರ್ನಾಟಕ’ ಅಡಿಯಲ್ಲಿ 10 ಪ್ರಮುಖ ಅಭಿವೃದ್ಧಿ ಮಿಷನ್‌ಗಳನ್ನು ಅವರು ಸ್ವಾಗತಿಸಿದರು.
ಈ ಮಿಷನ್‌ಗಳಲ್ಲಿ ಕಲ್ಯಾಣ ಕರ್ನಾಟಕ ಎಕಾನಮಿ ಮಿಷನ್, ಜೈವಿಕ ಆರ್ಥಿಕ ಮಿಷನ್, ರಕ್ತಹೀನತೆ ಮುಕ್ತ ಕಲ್ಯಾಣ ಕರ್ನಾಟಕ ಅಭಿಯಾನ, ಕಲಬುರಗಿ ಜಿಲ್ಲಾ ಮೂಲಸೌಕರ್ಯ ಅಭಿವೃದ್ಧಿ, ನಿವೇಶನರಹಿತ ಕುಟುಂಬಗಳಿಗೆ 50 ಸಾವಿರ ನಿವೇಶನ, ಐಟಿ ಪಾರ್ಕ್ ಮತ್ತು KRIYA, ಎಐ ಆಧಾರಿತ ಸಿಸಿಟಿವಿ ಜಾಲ, ಪ್ರವಾಸೋದ್ಯಮ ಮತ್ತು ಪಾರಂಪರಿಕ ತಾಣಗಳ ಅಭಿವೃದ್ಧಿ ಹಾಗೂ 10 ಕೋಟಿ ವೃಕ್ಷ ಅಭಿಯಾನ ಸೇರಿದಂತೆ ವಿವಿಧ ಯೋಜನೆಗಳು ಒಳಗೊಂಡಿವೆ ಎಂದು ಹೇಳಿದರು.
ಈ ಯೋಜನೆಗಳು ಆರ್ಥಿಕ, ಕೃಷಿ, ಆರೋಗ್ಯ, ನಗರ ಮೂಲಸೌಕರ್ಯ, ವಸತಿ ಹಾಗೂ ಪರಿಸರ ಕ್ಷೇತ್ರಗಳ ಅಭಿವೃದ್ಧಿಗೆ ನೆರವಾಗಲಿದ್ದು, ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಗುರುಲಿಂಗಪ್ಪ ಮಾಲಿಪಾಟೀಲ, ಗುರುಶರಣಗೌಡ ಪಾಟೀಲ, ಬಸವರಾಜ ಬಿರಾದಾರ, ಶಕ್ರಪ್ಪಗೌಡ, ಮಲ್ಲಾರೆಡ್ಡಿ, ಶರಣು ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.






