ಕೋಲಿ, ಕಬ್ಬಲಿಗ ಸಮಾಜವನ್ನು ಎಸ್‌ಟಿ ಪಂಗಡಕ್ಕೆ ಸೇರಿಸಲು ಕೇಂದ್ರಕ್ಕೆ ನಿಯೋಗ: ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ: ಕೋಲಿ ಹಾಗೂ ಕಬ್ಬಲಿಗ ಸಮಾಜವನ್ನು ಎಸ್‌ಟಿ ಪಂಗಡಕ್ಕೆ ಸೇರಿಸುವಂತೆ ಕೇಂದ್ರವನ್ನು ಒತ್ತಾಯಿಸಿ ಈಗಾಗಲೇ ಪತ್ರ ಬರೆದಿದ್ದೇನೆ. ಈಗ ಕೇಂದ್ರದಲ್ಲಿ ಅಧಿಕಾರದಲ್ಲಿ ನಮ್ಮ ಪಕ್ಷ ಇಲ್ಲ. ಆದರೂ ಕೂಡಾ ಸಚಿವ ಶಿವರಾಜ್ ತಂಗಡಗಿ ಅವರೊಂದಿಗೆ ಚರ್ಚಿಸಿ ಕೇಂದ್ರ ಎತ್ತಿರುವ ಲೋಪ ಸರಿಪಡಿಸಲು ಕೇಂದ್ರಕ್ಕೆ ನಿಯೋಗ ತೆಗೆದುಕೊಂಡು ಹೋಗುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕಲಬುರಗಿ ತಾಲೂಕಿನ ಹೊನ್ನ ಕಿರಣಗಿ ಗ್ರಾಮದಲ್ಲಿ 50 ಲಕ್ಷ ರೂ. ಗಳಲ್ಲಿ ನಿರ್ಮಾಣಗೊಂಡಿರುವ ನಿಜಶರಣ ಅಂಬಿಗರ ಚೌಡಯ್ಯ ರೈತ ಭವನ ಉದ್ಘಾಟನೆ ಹಾಗೂ 2.40 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಗೊಳ್ಳಲಿರುವ ವಿವಿಧ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.
ಸಂವಿಧಾನದ ಪೀಠಿಕೆಯಲ್ಲಿ ಆರ್ಥಿಕ ಹಾಗೂ ಸಾಮಾಜಿಕ ಸಮಾನತೆ ಉಲ್ಲೇಖಿಸಲಾಗಿದೆ. ಅದರಂತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮುಖ್ಯವಾಹಿನಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ ಎಂದು ಹೇಳಿದರು.
ಜಿಲ್ಲಾ ಅಂಬಿಗರ ಚೌಡಯ್ಯ ಭವನವನ್ನು 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಸಿಎಂ ಹಾಗೂ ಖರ್ಗೆ ಸಾಹೇಬರೊಂದಿಗೆ ಮಾತನಾಡಿ ಒಂದು ದಿನ ನಿಗದಿಪಡಿಸಿ ಉದ್ಘಾಟನೆ ಮಾಡಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಂ.ವೈ.ಪಾಟೀಲ್ ಮಾತನಾಡಿ, ಪ್ರಿಯಾಂಕ್ ಖರ್ಗೆ ಒಬ್ಬ ವ್ಯಕ್ತಿಯಲ್ಲ ಅವರೊಬ್ಬ ಶಕ್ತಿ. ಚಿಕ್ಕ ವಯಸ್ಸಿನಲ್ಲಿಯೇ ಐಟಿಬಿಟಿ ಹಾಗೂ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಖಾತೆ ವಹಿಸಿಕೊಂಡು ಅಮೋಘ ಸಾಧನೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕನೂರು, ಶಿವಾನಂದ್ ಪಾಟೀಲ್, ಮಶಾಕ್ ಪಟೇಲ್, ಸೇರಿದಂತೆ ಇನ್ನಿತರರು ಇದ್ದರು.







