ಸೇಡಂ | ಇಂಜೇಪಲ್ಲಿ ಗ್ರಾಮಸ್ಥರಿಗೆ ಸಿಮೆಂಟ್ ಕಾರ್ಖಾನೆಯಲ್ಲಿ ಉದ್ಯೋಗ ನೀಡುವಂತೆ ಆಗ್ರಹ

ಕಲಬುರಗಿ: ಸೇಡಂ ತಾಲ್ಲೂಕಿನ ವಾಸವಧತ್ತಾ ಸಿಮೆಂಟ್ ಕಾರ್ಖಾನೆ ಆಡಳಿತ ಮಂಡಳಿ ಇಂಜೇಪಲ್ಲಿ ಗ್ರಾಮಸ್ಥರ 51 ಮನೆಗಳು ಖರೀದಿಸಿ, ಮನೆಗೊಂದು ಖಾಯಂ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಈಗ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮೇ 15 ರಂದು ಕಾರ್ಖಾನೆಯ ಗಣಿಗಾರಿಕೆ (ಮೈನ್ಸ್) ತೆರಳುವ ಮುಖ್ಯದ್ವಾರದ ಮುಂದೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮಾಡಲಾಗುತ್ತಿದೆ ಎಂದು ಇಂಜೇಪಲ್ಲಿ ನಿರಾಶ್ರಿತರ ಸಂಘದ ಅಧ್ಯಕ್ಷ ವಿಠ್ಠಲ್ ಬಿ. ಇಂಜೇಳ್ಳಿಕರ್ ತಿಳಿಸಿದ್ದಾರೆ.
ಸೇಡಂ ಪಟ್ಟಣದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಾರು 18 ವರ್ಷಗಳಿಂದ ವಾಸವಧತ್ತಾ ಸಿಮೆಂಟ್ ಕಾರ್ಖಾನೆ ಆಡಳಿತ ಮಂಡಳಿ ಇಂಜೇಪಲ್ಲಿಯ 51 ಮನೆಗಳು ಖರೀದಿಸಿ ಮನೆಗೊಂದು ಖಾಯಂ ಉದ್ಯೋಗ ನೀಡುವುದಾಗಿ ಭರವಸೆ ನೀಡಿತ್ತು. ಈಗ ಯಾವುದೇ ಖಾಯಂ ಉದ್ಯೋಗ ನೀಡುವುದಿಲ್ಲ ಎಂದು ಹೇಳಿದ್ದು, ಕುಟುಂಬಸ್ಥರು ಬೀದಿಗೆ ಬರುವ ಪರಿಸ್ಥಿತಿ ಎದುರಾಗಿದೆ ಎಂದರು.
ಉಪ ವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಈ ಹಿಂದೆ ಸಿಮೆಂಟ್ ಕಾರ್ಖಾನೆಯ ಆಡಳಿತ ಮಂಡಳಿ ಹಾಗೂ ಇಂಜೇಪಲ್ಲಿ ಗ್ರಾಮಸ್ಥರ ಜೊತೆ ನಡೆದ ಸಭೆಯಲ್ಲಿ ಕಾರ್ಖಾನೆ ಆಡಳಿತ ಮಂಡಳಿಗೆ 60 ದಿನಗಳ ಒಳಗಾಗಿ ಮನೆಗೊಂದು ಖಾಯಂ ಉದ್ಯೋಗ ನೀಡಬೇಕು ಎಂದು ಸೂಚಿಸಿದರು.
3 ತಿಂಗಳು ಕಳೆದರೂ ಕಾರ್ಖಾನೆ ಆಡಳಿತ ಮಂಡಳಿ ಅವರು ಮತ್ತು ಉಪ ವಿಭಾಗಾಧಿಕಾರಿ ಕೂಡ ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಭರವಸೆ ಈಡೇರದೇ ಇರುವುದರಿಂದ ಇದೇ ಮೇ 15ರಂದು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಾಗರಾಜ್ ಇಂಜೇಪಲ್ಲಿ,ಹಣಮಂತ ಇಂಜೇಪಲ್ಲಿ, ಭೀಮಶಂಕರ ಕೊರವಿ, ಪರಶುರಾಮ ಇಂಜೇಪಲ್ಲಿ ಇದರು.







