ಕಲಬುರಗಿ: ಕಾಳೆ ಸಾವಿನ ಪ್ರಕರಣ ಸಂಬಂಧಿಸಿದಂತೆ ಪಿಎಸ್‌ಐ, ಸಿಬ್ಬಂದಿಯ ಅಮಾನತ್ತಿಗೆ ಆಗ್ರಹ

ಕಲ️ಬುರಗಿ: ಶರಣಸಿರಸಗಿ ಅಂಬೇಡ್ಕರ್ ನಗರದ ನಿವಾಸಿ ಉದಯಕುಮಾರ್ ಕಾಳೆ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶೋಕನಗರ ಠಾಣೆಯ ಪಿಎಸ್‌ಐ ಹಾಗೂ ಸಿಬ್ಬಂದಿಯನ್ನು ಅಮಾನತು ಮಾಡಬೇಕು ಹಾಗೂ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಬೇಕು ಎಂದು ಹೋರಾಟಗಾರ ಎ.ಬಿ️.ಹೊಸಮನಿ ಆಗ್ರಹಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಆರೋಪಗಳಿಲ್ಲದಿದ್ದರೂ ಪಿಎಸ್‌ಐ ಶಿವಪ್ಪ ಮತ್ತು ಪೇದೆಗಳಾದ ಶಿವಲಿಂಗಪ್ಪ ದಿಂಡೂರೆ , ನೀಲ️ಕಂಠಾಯ್, ವೈಜನಾಥ ಮೇತ್ರೆ ಸೇರಿ ಇತರರು ಉದಯಕುಮಾರ್ ಕಾಳೆಯನ್ನು ಕರೆತಂದು ಕೇಂದ್ರ ಬಸ್ ನಿಲ್ದಾಣದ ಬಳಿ ಇರುವ ಕಸ್ತೂರಿ ಲಾಡ್ಜ್ ಗೆ ಒಯ್ದು ಕೈ-ಕಾಲುಗಳಿಗೆ ಹಗ್ಗವನ್ನು ಕಟ್ಟಿ, ಕಟ್ಟಿಗೆಯಿಂದಹಲ್ಲೆ ನಡೆಸಿದ ಪರಿಣಾಮ ಆತ ಮೃತಪಟ್ಟಿದ್ದಾನೆ ಎಂದು ಅವರು ಆರೋಪಿಸಿದರು.
ದೂರುದಾರರು, ದೂರು ಬರೆದವರು, ಪಂಚರು,, ವಿಧಿವಿಜ್ಞಾನ ತಜ್ಞರು, ವೈದ್ಯಾಧಿಕಾರಿಗಳು, ಜಿಲ್ಲಾಧಿಕಾರಿಗಳು, ಪೊಲೀಸ್ ಆಯುಕ್ತರು, ಪೊಲೀಸ್ ಉಪ ಆಯುಕ್ತರು, ತನಿಖಾಧಿಕಾರಿಗಳು ಮತ್ತು ಪೊಲೀಸರು ಸೇರಿದಂತೆ 115 ಜನರು ಸಾಕ್ಷೀದಾರರು ಇರುವುದಾಗಿ ತಿಳಿಸಿದರು.
ಆರೋಪಿತರು ಸರ್ಕಾರಿ ನೌಕರರಾಗಿದ್ದು, ಇಲಾಖೆಯವರು ಇದುವರೆಗೆ ಯಾವುದೇ ಶಿಸ್ತು ಕ್ರಮ ಜರುಗಿಸಿಲ್ಲ. ಅಲ್ಲದೆ, ನ್ಯಾಯಾಲ️ಯದಿಂದ ಜಾಮೀನು ಕೂಡ ಪಡೆದಿಲ್ಲ. ಆರೋಪಿತರನ್ನು ಕೂಡಲೇ ಬಂಧಿಸಿ ಅಮಾನತುಗೊಳಿಸಿ ಇಲಾಖೆ ವಿಚಾರಣೆಗೆ ಒಳಪಡಿಸಬೇಕು. ಮೃತರ ಕುತುಂಬದವರಿಗೆ ಪರಿಹಾರ ಮತ್ತು ಸರಕಾರಿ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸೂರ್ಯಕಾಂತ ನಿಂಬಾಳಕರ, ವಿಮಲಬಾಯಿ ಕಾಳೆ, ಶಿವು ದೊಡ್ಡಮನಿ, ರಾಜಕುಮಾರ್ ನಡಗೇರಿ, ಗೌತಮ ಸಂಗೊಳಗಿ, ನಾಗೇಶ್ ಸೇರಿದಂತೆ ಮತ್ತಿತರರು ಇದ್ದರು.







