ತಳವಾರ ಸಮುದಾಯಕ್ಕೆ ಸಂವಿಧಾನಬದ್ಧ ಎಸ್.ಟಿ ಹಕ್ಕು ಜಾರಿಗೊಳಿಸಲು ಆಗ್ರಹ

ಕಲಬುರಗಿ: ಸಂವಿಧಾನಾತ್ಮಕವಾಗಿ ಪರಿಶಿಷ್ಟ ಪಂಗಡ (ST) ಪಟ್ಟಿಗೆ ಸೇರ್ಪಡೆಗೊಂಡಿರುವ ತಳವಾರ ಸಮುದಾಯಕ್ಕೆ ಎಸ್.ಟಿ ಜಾತಿ ಪ್ರಮಾಣ ಪತ್ರ ಸೇರಿದಂತೆ ದೊರೆತಿರುವ ಹಕ್ಕುಗಳನ್ನು ಯಾವುದೇ ಗೊಂದಲವಿಲ್ಲದೆ ಸಂಪೂರ್ಣವಾಗಿ ಜಾರಿಗೊಳಿಸಿ, ಸಮುದಾಯಕ್ಕೆ ಶಾಶ್ವತ ನ್ಯಾಯ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ತಳವಾರ ಮಹಾಸಭಾ ಅಧ್ಯಕ್ಷ ಚಂದ್ರಕಾಂತ ತಳವಾರ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ತಳವಾರ ಸಮುದಾಯದ ಎಸ್.ಟಿ ಹಕ್ಕುಗಳ ಅನುಷ್ಠಾನದಲ್ಲಿ ಉಂಟಾಗಿರುವ ಆಡಳಿತಾತ್ಮಕ ಗೊಂದಲದಿಂದ ವಿಶೇಷವಾಗಿ ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳ ಬಡ ತಳವಾರ ಕುಟುಂಬಗಳು ತೀವ್ರ ಸಂಕಷ್ಟ ಎದುರಿಸುತ್ತಿವೆ ಎಂದು ಹೇಳಿದರು.
ಎಸ್.ಟಿ ಪ್ರಮಾಣಪತ್ರ ವಿತರಣೆಗೆ ಸಂಬಂಧಿಸಿದ ಗೊಂದಲದ ಪರಿಣಾಮ ವಿದ್ಯಾರ್ಥಿಗಳ ಶಿಕ್ಷಣ, ಉದ್ಯೋಗಾವಕಾಶಗಳು, ಸರ್ಕಾರಿ ಸೌಲಭ್ಯಗಳ ಪಡೆಯುವಿಕೆ ಹಾಗೂ ಸಮುದಾಯದ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ತೀವ್ರ ಹಿನ್ನಡೆಯಾಗಿದೆ. ಒಂದು ಕಡೆ ಸಂವಿಧಾನ ಹಕ್ಕು ನೀಡಲಾಗಿದ್ದರೂ, ಮತ್ತೊಂದೆಡೆ ಆ ಹಕ್ಕಿನ ಪ್ರಯೋಜನ ಪಡೆಯಲು ಅರ್ಹರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಷಾದನೀಯ ಎಂದರು.
ಈ ಸಮಸ್ಯೆ ಪರಿಹರಿಸುವಂತೆ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಕರ್ನಾಟಕ ರಾಜ್ಯ ತಳವಾರ ಮಹಾಸಭಾದ ಕಲಬುರಗಿ ಜಿಲ್ಲಾ ಘಟಕ ಹಲವು ಬಾರಿ ಚರ್ಚಿಸಿದ್ದು, ಸರ್ಕಾರಕ್ಕೆ ಅನೇಕ ಮನವಿಗಳನ್ನು ಸಲ್ಲಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೂ ಸಮಸ್ಯೆಯನ್ನು ಹಲವು ಬಾರಿ ತರಲಾಗಿದೆ. ಆದರೂ ಇದುವರೆಗೆ ಶಾಶ್ವತ ಹಾಗೂ ಸ್ಪಷ್ಟ ಪರಿಹಾರ ದೊರೆತಿಲ್ಲ ಎಂದು ಆರೋಪ ಮಾಡಿದರು.
ನೂತನ ಮುಖ್ಯಮಂತ್ರಿಗಳು ಈ ಗಂಭೀರ ವಿಚಾರವನ್ನು ವಿಶೇಷ ಆದ್ಯತೆಯಿಂದ ಪರಿಗಣಿಸಿ, ಸಂಬಂಧಿಸಿದ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಬೇಕು. ಎಸ್.ಟಿ ಪ್ರಮಾಣಪತ್ರ ವಿತರಣೆಗೆ ಸಂಬಂಧಿಸಿದ ಎಲ್ಲ ಗೊಂದಲಗಳನ್ನು ನಿವಾರಿಸಿ, ತಳವಾರ ಸಮುದಾಯಕ್ಕೆ ಸ್ಪಷ್ಟ, ಏಕರೂಪ ಹಾಗೂ ಶಾಶ್ವತ ಮಾರ್ಗಸೂಚಿ ಅಥವಾ ಸರ್ಕಾರಿ ಆದೇಶ ಹೊರಡಿಸುವ ಮೂಲಕ ಸಂವಿಧಾನಬದ್ಧ ಹಕ್ಕುಗಳನ್ನು ಖಚಿತಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಶಿವಕುಮಾರ್ ಫಿರೋಜಾಬಾದ, ರವಿ ಡೊಂಗರಾಂವ್, ಜಟ್ಟೆಪ್ಪ ಶಕಾಪುರ, ಚಂದ್ರಶೇಖರ್ ಶಹಾಪುರ ಹಾಗೂ ಸಿದ್ದು ತಂಗಡಗಿ ಉಪಸ್ಥಿತರಿದ್ದರು.






