ಬ್ರಿಮ್ಸ್ ಆಸ್ಪತ್ರೆಗೆ ಉಪಲೋಕಾಯುಕ್ತ ಬಿ.ವೀರಪ್ಪ ಭೇಟಿ : ಲಕ್ಷಾಂತರ ಹಣ, ಚೆಕ್ ಪತ್ತೆ

ಬೀದರ್ : ಬ್ರಿಮ್ಸ್ ಆಸ್ಪತ್ರೆಗೆ ಉಪಲೋಕಾಯುಕ್ತ ಬಿ.ವೀರಪ್ಪ ಅವರು ಶನಿವಾರ ಭೇಟಿ ನೀಡಿದ ಸಮಯದಲ್ಲಿ ಬ್ರಿಮ್ಸ್ ಆಸ್ಪತ್ರೆಯ ಲ್ಯಾಬ್ ಟೆಕ್ನಿಶಿಯನ್ ಬಳಿ ಲಕ್ಷಾಂತರ ರೂ. ಹಣ ಹಾಗೂ 1 ಲಕ್ಷ ರೂಪಾಯಿ ಚೆಕ್ ಪತ್ತೆಯಾಗಿದೆ.
ಉಪಲೋಕಾಯುಕ್ತ ಬಿ. ವೀರಪ್ಪ ಅವರು ಶನಿವಾರ ನಗರದ ಹಲವು ಕಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಮಯದಲ್ಲಿ ಅವರು ಬ್ರಿಮ್ಸ್ ಆಸ್ಪತ್ರೆಗೂ ಕೂಡ ಭೇಟಿ ನೀಡಿದ್ದರು. ಈ ವೇಳೆ ಬ್ರಿಮ್ಸ್ ನಲ್ಲಿ ಲ್ಯಾಬ್ ಟೆಕ್ನಿಶಿಯನ್ ಆಗಿ ಕಾರ್ಯನಿರ್ವಹಿಸುತ್ತಿರುವ ಸಂಜುಕುಮಾರ್ ಅವರ ಬಳಿ ಲಕ್ಷಾಂತರ ರೂ.ಹಣ ಮತ್ತು ಚೆಕ್ ಪತ್ತೆಯಾಗಿದೆ.
ಹಣ ಪತ್ತೆಯಾಗಿರುವುದರಿಂದ ಉಪಲೋಕಾಯುಕ್ತರು ಸೇರಿದಂತೆ ಅಲ್ಲಿನ ಅಧಿಕಾರಿಗಳೆಲ್ಲರಿಗೂ ಅಚ್ಚರಿಯಾಗಿದೆ. ಲೋಕಾಯುಕ್ತ ತಂಡವು ಸ್ಥಳದಲ್ಲೇ ದಾಖಲೆಗಳನ್ನು ಪರಿಶೀಲನೆ ನಡೆಸಿತು.
ಈ ವೇಳೆ ವೈದ್ಯಾಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಬಿ.ವೀರಪ್ಪ ಅವರು, ಸುಮೋಟೋ ಕೇಸ್ ದಾಖಲಿಸಲು ಸೂಚನೆ ನೀಡಿದರು. ಲ್ಯಾಬ್ ಟೆಕ್ನಿಶಿಯನ್ ಬಳಿ ಪತ್ತೆಯಾದ ಹಣವನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಈ ಹಣದ ಮೂಲ ಕೇಳಿದಾಗ ಸಿಬ್ಬಂದಿ ಸೂಕ್ತ ಉತ್ತರವನ್ನು ನೀಡಲು ವಿಫಲರಾಗಿದ್ದಾರೆ ಎಂದು ತಿಳಿದು ಬಂದಿದೆ.






