ಪದವಿ ಶಿಕ್ಷಣದಲ್ಲಿ ಸ್ಪಷ್ಟ ಗುರಿ, ಶಿಸ್ತು ಬೆಳೆಸಿಕೊಳ್ಳಿ : ಶಾಸಕ ಅಲ್ಲಮಪ್ರಭು ಪಾಟೀಲ್

ಕಲಬುರಗಿ: ವಿದ್ಯಾರ್ಥಿಗಳು ಪದವಿ ಶಿಕ್ಷಣದ ಆರಂಭದಿಂದಲೇ ಸ್ಪಷ್ಟ ಗುರಿ, ಆತ್ಮವಿಶ್ವಾಸ ಹಾಗೂ ಶಿಸ್ತನ್ನು ಬೆಳೆಸಿಕೊಳ್ಳಬೇಕು. ಶಿಕ್ಷಣವೆಂದರೆ ಕೇವಲ ಪದವಿ ಪಡೆಯುವುದಲ್ಲ; ಜ್ಞಾನಾರ್ಜನೆ, ವ್ಯಕ್ತಿತ್ವ ವಿಕಸನ, ಉತ್ತಮ ಸಂಸ್ಕಾರ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ರೂಢಿಸಿಕೊಳ್ಳುವ ಪ್ರಕ್ರಿಯೆಯಾಗಿದೆ ಎಂದು ದಕ್ಷಿಣ ಕ್ಷೇತ್ರದ ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಲ್ಲಮಪ್ರಭು ಪಾಟೀಲ ಹೇಳಿದರು.
ನಗರದ ಸರಕಾರಿ ಮಹಾವಿದ್ಯಾಲಯ (ಸ್ವಾಯತ್ತ)ದಲ್ಲಿ 2026–27ನೇ ಸಾಲಿನ ಬಿ.ಎ., ಬಿ.ಎಸ್ಸಿ. ಮತ್ತು ಬಿ.ಕಾಂ. ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ‘ಹೊಸ ದಿಗಂತ–ಪದವಿ ಶಿಕ್ಷಣಕ್ಕೆ ಆತ್ಮವಿಶ್ವಾಸದ ಆರಂಭ’ ಎಂಬ ಫ್ರೆಶರ್ಸ್ ಓರಿಯಂಟೇಶನ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನ ಭವಿಷ್ಯ ರೂಪಿಸಿಕೊಳ್ಳುವ ಮಹತ್ವದ ಘಟ್ಟವಾಗಿದೆ. ಸಮಯದ ಮಹತ್ವ ಅರಿತು ಶಿಸ್ತುಬದ್ಧ ಅಧ್ಯಯನದ ಜತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು, ರಾಷ್ಟ್ರೀಯ ಸೇವಾ ಯೋಜನೆ ಸೇರಿದಂತೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಇದರಿಂದ ನಾಯಕತ್ವದ ಗುಣ, ಸಂವಹನ ಕೌಶಲ, ಆತ್ಮವಿಶ್ವಾಸ ಹಾಗೂ ಸಾಮಾಜಿಕ ಕಳಕಳಿ ಬೆಳೆಯುತ್ತವೆ ಎಂದರು.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ತಮ ಅಂಕ ಗಳಿಸುವುದರ ಜತೆಗೆ ಉದ್ಯೋಗಕ್ಕೆ ಅಗತ್ಯವಾದ ಕೌಶಲಗಳನ್ನು ಬೆಳೆಸಿಕೊಳ್ಳುವುದು ಮುಖ್ಯ. ಶಿಕ್ಷಕರ ಮಾರ್ಗದರ್ಶನ ಪಡೆದು, ಗ್ರಂಥಾಲಯದ ಸದುಪಯೋಗ ಮಾಡಿಕೊಂಡು ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಅಪ್ಪುಗೆರ ಸೋಮಶೇಖರ ಅವರು ಮಾತನಾಡಿ, ಪದವಿ ಶಿಕ್ಷಣವು ಹೊಸ ಅವಕಾಶಗಳು ಹಾಗೂ ಸವಾಲುಗಳಿಗೆ ತೆರೆದುಕೊಳ್ಳುವ ಹಂತವಾಗಿದೆ. ವಿದ್ಯಾರ್ಥಿಗಳು ಪಠ್ಯಪುಸ್ತಕಗಳ ಜ್ಞಾನಕ್ಕೆ ಸೀಮಿತವಾಗದೆ ಸಾಹಿತ್ಯ, ಸಂಸ್ಕೃತಿ, ಸಮಾಜ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ಅರಿವು ಬೆಳೆಸಿಕೊಳ್ಳಬೇಕು. ಓದುವ ಹವ್ಯಾಸ, ಭಾಷಾ ಕೌಶಲ ಮತ್ತು ವಿಚಾರಶೀಲತೆ ವ್ಯಕ್ತಿತ್ವವನ್ನು ಸಮೃದ್ಧಗೊಳಿಸುತ್ತವೆ ಎಂದರು.
ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ. ಇಂದುಮತಿ ಪಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪ್ರಾಧ್ಯಾಪಕಿ ಡಾ. ಸವಿತಾ ತಿವಾರಿ, ಸ್ನಾತಕೋತ್ತರ ವಿಭಾಗದ ಡೀನ್ ಡಾ. ಮಲ್ಲೇಶಪ್ಪ ಕುಂಬಾರ, ಕಲಾ ವಿಭಾಗದ ಡೀನ್ ಡಾ. ವಿಜಯಕುಮಾರ ಸಾಲಿಮನಿ, ವಾಣಿಜ್ಯ ವಿಭಾಗದ ಡೀನ್ ಡಾ. ರಾಜಕುಮಾರ ಸಲಗರ, ವಿಜ್ಞಾನ ವಿಭಾಗದ ಡೀನ್ ಡಾ. ದವಲಪ್ಪ ಬಿ.ಎಚ್., ಸಿಬ್ಬಂದಿ ಕಾರ್ಯದರ್ಶಿ ಡಾ. ರವೀಂದ್ರಕುಮಾರ ಭಂಡಾರಿ, ಐಕ್ಯೂಎಸಿ ಸಂಯೋಜಕ ಮಹೇಶ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಮೊದಲ ಅಧಿವೇಶನದಲ್ಲಿ ‘ವ್ಯಕ್ತಿತ್ವ ವಿಕಸನ ಮತ್ತು ಸಮಯ ನಿರ್ವಹಣೆ’ ಕುರಿತು ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯ ಕಲಬುರಗಿ ಘಟಕದ ಕಾರ್ಯದರ್ಶಿ ಸಿಎ ಶಂಭುಲಿಂಗಪ್ಪ ಜ.ಅವಂಟಿ ಉಪನ್ಯಾಸ ನೀಡಿದರು. ಡಾ. ಶ್ರೀನಿವಾಸ ರಾಮಾಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಡಾ. ರವಿ ಬೌದ್ದೆ ನಿರ್ವಹಿಸಿದರು.
ಎರಡನೇ ಅಧಿವೇಶನದಲ್ಲಿ ಮಹಾವಿದ್ಯಾಲಯದ ಪರಿಚಯ, ವಿವಿಧ ಕೋರ್ಸ್‌ಗಳು ಹಾಗೂ ಘಟಕಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ವಿಜ್ಞಾನ ವಿಭಾಗದ ಡೀನ್ ಡಾ. ದವಲಪ್ಪ ಬಿ.ಎಚ್. ಸಂಪನ್ಮೂಲ ವ್ಯಕ್ತಿಯಾಗಿದ್ದರು. ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಮೊಹಮ್ಮದ್ ಆರಿಫ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಪ್ರಾಧ್ಯಾಪಕಿ ಡಾ. ಶಾಮಲಾ ಸ್ವಾಮಿ ನಿರ್ವಹಿಸಿದರು.
ಸಮಾರೋಪ ಸಮಾರಂಭದಲ್ಲಿ ಪರೀಕ್ಷಾ ವಿಭಾಗದ ಉಪನಿಯಂತ್ರಕ ಅಮಿತಕುಮಾರ ಬುದಿಹಾಳ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಎನ್‌ಎಸ್‌ಎಸ್, ಎನ್‌ಸಿಸಿ, ರೆಡ್‌ಕ್ರಾಸ್, ಸ್ಕೌಟ್ಸ್ ಮತ್ತು ಗೈಡ್ಸ್, ರೋವರ್ಸ್ ಮತ್ತು ರೇಂಜರ್ಸ್, ದೈಹಿಕ ಶಿಕ್ಷಣ ಹಾಗೂ ವಿದ್ಯಾರ್ಥಿ ಕಲ್ಯಾಣ ವಿಭಾಗ ಸೇರಿದಂತೆ ವಿವಿಧ ಘಟಕಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವು.
ಮಹೇಶ ಸ್ವಾಗತಿಸಿದರು. ಡಾ. ವಿಜಯಕುಮಾರ ಸಾಲಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀದೇವಿ ರಾಠೋಡ ಅತಿಥಿಗಳನ್ನು ಪರಿಚಯಿಸಿದರು. ಡಾ. ಪಂಚಾಕ್ಷರಿ ವಂದಿಸಿದರು. ಡಾ. ಬಲಭೀಮ ಸಾಂಗ್ಲಿ ನಿರೂಪಿಸಿದರು. ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.






