ಕಲಬುರಗಿ ನಗರ ಸಮಗ್ರ ಅಭಿವೃದ್ಧಿಗಾಗಿ ಮೂಲಭೂತ ಸೌಲಭ್ಯಗಳ ಹೆಚ್ಚಳ: ಪ್ರಿಯಾಂಕ್ ಖರ್ಗೆ

ಕಲಬುರಗಿ: ಕಲಬುರಗಿ ನಗರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಸೌಲಭ್ಯಗಳನ್ನು ಹೆಚ್ಚಿಸುವದರೊಂದಿಗೆ ‘ಸ್ಮಾರ್ಟ್ ಸಿಟಿ’ ರೂಪಿಸುವ ಸಲುವಾಗಿ ತಜ್ಞರೊಂದಿಗೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಚರ್ಚಿಸಿ, ಮುಂದಿನ ಮೂರು ವರ್ಷದ ಒಳಗೆ ಕಲಬುರಗಿ ನಗರವನ್ನು ಅತ್ಯುತ್ತಮ ನಗರವಾಗಿ ರೂಪಿಸಲು ಯೋಜನೆಗಳನ್ನು ರೂಪಿಸುವುದಾಗಿ ಹೇಳಿದರು.
ಗುರುವಾರ ವಿಕಾಸಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಕಲಬುರಗಿ ಜಿಲ್ಲೆಯ ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಗುಣಮಟ್ಟದ ಕುಡಿಯುವ ನೀರು ಸರಬರಾಜು, ಸುಸ್ಥಿರ ಒಳಚರಂಡಿ ವ್ಯವಸ್ಥೆ, ತ್ಯಾಜ್ಯ ನೀರು ಮರುಬಳಕೆ, ಘನತ್ಯಾಜ್ಯ ಬೇರ್ಪಡಿಸುವಿಕೆ ಹಾಗೂ ವಿಲೇವಾರಿ, ಉತ್ತಮ ಸಂಚಾರಿ ವ್ಯವಸ್ಥೆ, ಹಸಿರೀಕರಣ ಮುಂತಾದ ಮೂಲಭೂತ ಸೌಲಭ್ಯಗಳನ್ನು ಕಲಬುರಗಿ ನಗರಕ್ಕೆ ಒದಗಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು.
ಕಲಬುರಗಿ ನಗರವನ್ನು ಅತ್ಯುತ್ತಮ ಮೂಲಭೂತ ಸೌಲಭ್ಯಗಳ ನಗರವಾಗಿಸುವ ಮೂಲಕ ಹೆಚ್ಚು ಉದ್ದಿಮೆಗಳನ್ನು ಆಕರ್ಷಿಸುವುದರೊಂದಿಗೆ ಹೆಚ್ಚು ಹೆಚ್ಚು ಮಂದಿ ಯುವಕ ಯವತಿಯರಿಗೆ ಉದ್ಯೋಗ ಸೃಷ್ಟಿಸಲು ಸಾಧ್ಯವಾಗುತ್ತದೆ ಎಂದು ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟರು.
ನಗರದ ನೈರ್ಮಲ್ಯ ವ್ಯವಸ್ಥೆಯನ್ನು ಸುಧಾರಿಸುವ ಅವಶ್ಯಕತೆ ಇದೆ ಎಂದು ಹೇಳಿದ ಅವರು, ಈಗಿನ ಶೇ.50ರಷ್ಟಿರುವ ನೈರ್ಮಲ್ಯ ವ್ಯವಸ್ಥೆಯನ್ನು ನೂರಕ್ಕೆ ನೂರರಷ್ಟು ಬಲಪಡಿಸುವ ಗುರಿಯನ್ನು ಇರಿಸಿಕೊಳ್ಳಲಾಗಿದೆ, ಈ ಸಲುವಾಗಿ ನೈರ್ಮಲ್ಯ ನೌಕರರ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ನಗರದ ನೂರು ಲಕ್ಷ ಚದರ ಅಡಿ ಪ್ರದೇಶದಲ್ಲಿ ಉದ್ಯಾನ ಹಾಗೂ ಮರಗಳನ್ನು ಪೆÇೀಷಿಸುವುದರೊಂದಿಗೆ ಕಲಬುರಗಿ ನಗರವನ್ನು ಹಸಿರೀಕರಣಗೊಳಿಸುವ ಯೋಜನೆಯನ್ನು ರೂಪಿಸಲಾಗುವುದು ಎಂದು ಅವರು ಪ್ರಕಟಿಸಿದರು.
ಈ ಯೋಜನೆಗಳಿಗೆ ಅನುಗುಣವಾಗಿ ಕಾರ್ಯಕ್ರಮ ರೂಪಿಸಲು ಇಂಡಿಯನ್ ಇನ್ಸಿಟಿಟ್ಯೂಟ್ ಫಾರ್ ಹ್ಯೂಮನ್ ಸೆಟಲ್‍ಮೆಂಟ್ ಸಂಸ್ಥೆಯು ಸಿದ್ಧಪಡಿಸಿದ್ದ ತಜ್ಞರನ್ನು ಒಳಗೊಂಡ ವರದಿಯನ್ನು ಸಭೆಯಲ್ಲಿ ಭಾಗವಹಿಸಿದ್ದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ಅವರು ತಂದರು.
ಸಭೆಯಲ್ಲಿ ಕಲಬುರಗಿ ಜಿಲ್ಲೆಯ ಶಾಸಕರಾದ ಅಲ್ಲಮಪ್ರಭು ಪಾಟೀಲ್, ಕನೀಝ್ ಫಾತಿಮಾ, ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಎಲ್ಲಪ್ಪ ನಾಯ್ಕೋಡಿ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಝರ್ ಆಲಂ ಖಾನ್, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ್ ಸಿಂಧೆ ಮುಂತಾದವರು ಭಾಗವಹಿಸಿದ್ದರು.







