ಬಿಜೆಪಿಯವರಿಗೆ ಅಭಿವೃದ್ಧಿ ಕೆಲಸಗಳು ಕಣ್ಣಿಗೆ ಕಾಣುತ್ತಿಲ್ಲ : ಮಲ್ಲಿಕಾರ್ಜುನ ಕಾಳಗಿ

ಚಿತ್ತಾಪುರ; ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಅಭಿವೃದ್ಧಿ ಆಗಿದೆ ಅಥವಾ ಇಲ್ಲಾ ಎನ್ನುವುದನ್ನು ಬಿಜೆಪಿಯವರು ತಮ್ಮ ಕಣ್ಣಿಗೆ ಹಾಕಿಕೊಂಡ ಆರ್ ಎಸ್ ಎಸ್ ಚಸ್ಮಾ ತೆಗೆದು ನೋಡಿದಾಗ ಗೊತ್ತಾಗುತ್ತೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ ತಿರುಗೇಟು ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಚಿವ ಪ್ರಿಯಾಂಕ್ ಖರ್ಗೆ ಅವರು ಚಿತ್ತಾಪುರ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಆದರೆ ಬಿಜೆಪಿಯವರಿಗೆ ಅಭಿವೃದ್ಧಿ ಕೆಲಸಗಳು ಕಣ್ಣಿಗೆ ಕಾಣುತ್ತಿಲ್ಲ. ಹೀಗಾಗಿ ಆರ್ ಎಸ್ ಎಸ್ ಚಸ್ಮಾ ತೆಗೆದು ಸಂವಿಧಾನ ಎಂಬ ಚಸ್ಮಾ ಹಾಕಿಕೊಳ್ಳಬೇಕು ಎಂದರು.
ಸಂವಿಧಾನದಡಿಯಲ್ಲಿ ಎಲ್ಲರೂ ಸಮಾನರು, ಯಾವುದೇ ಸಂಘ ಸಂಸ್ಥೆಗಳು ಇರಲಿ ನೋಂದಣಿ ಆಗಲಿ ಎನ್ನುವುದು ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ. ಇದರಲ್ಲಿ ಯಾವುದೇ ತಪ್ಪಿಲ್ಲ, ಇದನ್ನು ಬಿಜೆಪಿಯವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಹೇಳಿದರು.
ಸಚಿವ ಪ್ರಿಯಾಂಕ್ ಖರ್ಗೆ ಅವರ ಅವಿರತ ಶ್ರಮದಿಂದ ಪಟ್ಟಣದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆದರೂ ಸುಖಾಸುಮ್ಮನೆ ಆಧಾರರಹಿತ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಬಾಹರಪೇಟ್'ದ ದಲಿತರ ಏರಿಯಾದಲ್ಲಿ ಮಳೆಗಾಲದ ಸಮಯದಲ್ಲಿ ರುದ್ರಭೂಮಿ ರಸ್ತೆಯಲ್ಲಿ ಮಳೆ ನೀರು ತುಂಬಿ ಅಂತಿಮ ಸಂಸ್ಕಾರಕ್ಕೆ ತೊಂದರೆಯಾಗುತ್ತಿದೆ. ಹೀಗಾಗಿ ಇಲ್ಲೊಂದು ಬ್ರೀಡ್ಜ್ ನಿರ್ಮಾಣ ಮಾಡಬೇಕು ಎಂದು ಸಚಿವರಿಗೆ ಮನವಿ ಮಾಡಲಾಗಿತ್ತು, ಇದರಿಂದ ಬ್ರೀಡ್ಜ್ ಮಂಜೂರಾಗಿದೆ, ದಲಿತರ ಏರಿಯಾದ ಅಭಿವೃದ್ಧಿ ಆಗಬಾರದು ಎನ್ನುವ ಮನುಸ್ಮೃತಿ ಬಿಡಬೇಕು ಎಂದು ಹೇಳಿದರು.
ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಜಗದೀಶ್ ಚವ್ಹಾಣ ಮಾತನಾಡಿ, ಸ್ಟೇಷನ್ ತಾಂಡಾದಲ್ಲಿ ಚೇಂಜ್ ಆಫ್ ವರ್ಕ್ ದಿಂದ ಸಿಸಿ ರಸ್ತೆ ಹಾಗೂ ಸೇವಾಲಾಲ್ ದೇವಸ್ಥಾನದ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಹೀಗಾಗಿ ಸ್ವಲ್ಪ ವಿಳಂಬವಾಗಿದೆ ಎಂದು ಸ್ಪಷ್ಟಪಡಿಸಿದರು.
ಚಿತ್ತಾಪುರದಲ್ಲಿ ಏನೆಲ್ಲಾ ಅಭಿವೃದ್ಧಿ ಕೆಲಸಗಳು ಆಗಿವೆ ಎನ್ನುವುದು ಎಲ್ಲರಿಗೂ ಗೊತ್ತಿದೆ, ಸರ್ಕಾರಿ ಕನ್ಯಾ ಪ್ರೌಢ ಶಾಲೆ, ದಂಡೋತಿ ಬ್ರೀಡ್ಜ್ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಕಣ್ಣಿಗೆ ಕಾಣುತ್ತೀವೆ ಎಂದು ತಿಳಿಸಿದರು.
ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸಂಜಯ್ ಬುಳಕರ್ ಮಾತನಾಡಿ, ಪ್ರಿಯಾಂಕ್ ಖರ್ಗೆ ಚಿತ್ತಾಪುರ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಹಗಲು ರಾತ್ರಿ ಎನ್ನದೇ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.






