ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ವಿದ್ಯಾರ್ಥಿ-ಯುವಜನರ ಐಕ್ಯ ಹೋರಾಟಕ್ಕೆ ಸಂದ ಜಯ: ಡಿವೈಎಫ್ಐ ರಾಜ್ಯಾಧ್ಯಕ್ಷೆ ಲವಿತ್ರ ವಸ್ತ್ರದ್

ಕಲಬುರಗಿ: ನೀಟ್ ಪರೀಕ್ಷಾ ಅಕ್ರಮ ಹಾಗೂ ಪೇಪರ್ ಲೀಕ್ ಹಗರಣವನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿರುವ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ರಾಜ್ಯಾಧ್ಯಕ್ಷೆ ಲವಿತ್ರ ವಸ್ತ್ರದ್ ಅವರು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ದೇಶದ ಲಕ್ಷಾಂತರ ವಿದ್ಯಾರ್ಥಿ-ಯುವಜನರ ಐಕ್ಯ ಹೋರಾಟಕ್ಕೆ ಸಂದ ಐತಿಹಾಸಿಕ ಜಯ ಎಂದು ಹೇಳಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿದ ಅವರು, ದೇಶಾದ್ಯಂತ ವಿದ್ಯಾರ್ಥಿಗಳು ಮತ್ತು ಯುವಜನರು ನೀಟ್ ಪರೀಕ್ಷೆಯಲ್ಲಿನ ಅಕ್ರಮ ಹಾಗೂ ಪೇಪರ್ ಲೀಕ್ ಹಗರಣವನ್ನು ಖಂಡಿಸಿ ನಡೆಸಿದ ಸುದೀರ್ಘ, ಸಂಘಟಿತ ಮತ್ತು ತೀವ್ರ ಹೋರಾಟಕ್ಕೆ ಈ ಬೆಳವಣಿಗೆ ಫಲ ನೀಡಿದೆ ಎಂದು ತಿಳಿಸಿದ್ದಾರೆ.
"ದೇಶದಾದ್ಯಂತ ವ್ಯಕ್ತವಾಗಿದ್ದ ಸಾರ್ವಜನಿಕ ಆಕ್ರೋಶ ಹಾಗೂ ದೆಹಲಿಯ ಜಂತರ್ ಮಂತರ್‌ನಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ನಡೆದ ನಿರಂತರ ಪ್ರತಿಭಟನೆಯ ಪರಿಣಾಮವಾಗಿ ಶಿಕ್ಷಣ ಸಚಿವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವುದು ಕೇವಲ ಒಬ್ಬ ಸಚಿವರ ನಿರ್ಗಮನವಲ್ಲ; ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಉತ್ತರದಾಯಿತ್ವ ಮತ್ತು ನ್ಯಾಯವನ್ನು ಆಗ್ರಹಿಸಿ ಹೋರಾಡಿದ ಲಕ್ಷಾಂತರ ವಿದ್ಯಾರ್ಥಿಗಳ ಹೋರಾಟಕ್ಕೆ ದೊರೆತ ಗೆಲುವಾಗಿದೆ" ಎಂದು ಅವರು ಹೇಳಿದ್ದಾರೆ.
ದೇಶದಾದ್ಯಂತ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಜಂಟಿಯಾಗಿ ನಡೆಸಿದ ಹೋರಾಟದಲ್ಲಿ ಸಚಿವರ ರಾಜೀನಾಮೆ ಪ್ರಮುಖ ಬೇಡಿಕೆಯಾಗಿತ್ತು. ಆ ಬೇಡಿಕೆ ಈಡೇರಿರುವುದು ವಿದ್ಯಾರ್ಥಿ ಸಮುದಾಯದ ಐಕ್ಯತೆ ಮತ್ತು ಪ್ರಜಾಸತ್ತಾತ್ಮಕ ಹೋರಾಟದ ಶಕ್ತಿಗೆ ಸಂದ ಜಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಆದಾಗ್ಯೂ, ಹೋರಾಟ ಇಲ್ಲಿಗೇ ಅಂತ್ಯವಾಗುವುದಿಲ್ಲ. ಪ್ರತಿಭಟನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ಗಳನ್ನು ಹಿಂಪಡೆಯುವುದು, ಪರೀಕ್ಷಾ ಅಕ್ರಮದಿಂದ ಪ್ರಾಣ ಕಳೆದುಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ 1 ಕೋಟಿ ಪರಿಹಾರ ನೀಡುವುದು ಸೇರಿದಂತೆ ಉಳಿದ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಡಿವೈಎಫ್ಐ ತನ್ನ ಹೋರಾಟವನ್ನು ಮುಂದುವರಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಮೋದ ಪಾಂಚಾಳ, ಬಾಬಾಸಾಬ್, ಸಾನಿಯಾ, ಇಮಾಮ್ ಸಾಬ್ ಇದ್ದರು.






