ಕಲಬುರಗಿ: ಕಾರಾಗೃಹದ ಬಂದಿ ನಿವಾಸಿಗಳು, ಅಧಿಕಾರಿ, ಸಿಬ್ಬಂದಿಗಳಿಗೆ ಕನ್ನಡಕ ವಿತರಣೆ

ಕಲಬುರಗಿ: ಕಾರಾಗೃಹದ ಬಂದಿ ನಿವಾಸಿಗಳು ಹಾಗೂ ಕಾರಾಗೃಹದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿಗಳು ಸೇರಿದಂತೆ ಒಟ್ಟು 200 ಜನರಿಗೆ ಮಂಗಳವಾರ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಉಚಿತ ಕನ್ನಡಕ ವಿತರಿಸಲಾಯಿತು.
ಕಲಬುರಗಿ ಕಡಗಂಚಿಯ ಕಾರ್ಮಲ್ ಜ್ಯೋತಿ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್(ರಿ) ಶಾಖೆಯ ಕಾರ್ಯದರ್ಶಿ ಡಾ. ಫಾಧರ್ ವಿಲಿಯಂ ಮಿರಾಂದ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಮ್ಮ ಪಂಚೇಂದ್ರಿಯಗಳಲ್ಲಿ ಕಣ್ಣು ಕೂಡ ಒಂದು. ಇದನ್ನು ಸರಿಯಾದ ಸುಸ್ಥಿತಿಯಲ್ಲಿಡಬೇಕು. ನಿಯಮಿತವಾಗಿ ತಪಾಸಣೆಗೆ ಒಳಪಡಿಸಿ ರಕ್ಷಣೆ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಂಸ್ಥೆ ಮುಖ್ಯಸ್ಥೆ ಡಾ. ಅನಿತಾ ಆರ್. ಮಾತನಾಡಿ, ಈ ಮುಂಚೆ ನೇತ್ರ ತಪಾಸಣೆ ಮಾಡಲಾಗಿದ್ದು, ಅದರನ್ವಯ ಕನ್ನಡಕ ಅವಶ್ಯಕತೆ ಇದ್ದವರಿಗೆ ಉಚಿತವಾಗಿ ಕನ್ನಡಕವನ್ನು ನೀಡಲಾಗಿದೆ. ತಾವು ಈ ಕನ್ನಡವನ್ನು ನಿಯಮಿತವಾಗಿ ಧರಿಸಿ ತಮ್ಮ ಕಣ್ಣಿನ ರಕ್ಷಣೆಯನ್ನು ಮಾಡಲು ತಿಳಿಸಿದರು ಹಾಗೂ ಉಚಿತವಾಗಿ ಕನ್ನಡಕವನ್ನು ವಿತರಿಸಿದ್ದಕ್ಕಾಗಿ ಎನ್.ಜಿ.ಓ. ಇವರಿಗೆ ಅಭಿನಂದನೆ ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧೀಕ್ಷಕ ಶ್ರೀ ಎಂ.ಹೆಚ್. ಆಶೇಖಾನ್, ಫಾದರ್ ದೀಪಕ್ ಥಾಮಸ್, ಅಲ್‍ವಿನ್, ಎಲ್‍ಸ್ಟನ್, ಸ್ಟನ್ ಜಾರ್ರ್, ಲೈಕ್ರಸ್ಟ ಹಿಲರಿ, ವಿಲ್ಸ್‍ನ್, ರಿಕ್ಸನ್, ಸಂಸ್ಥೆಯ ಸಹಾಯಕ ಆಡಳಿತಾಧಿಕಾರಿ ಭೀಮಾಶಂಕರ್ ಡಾಂಗೆ, ಸಂಸ್ಥೆಯ ಜೈಲರ್‍ಗಳಾದ ಸಾಗರ ಪಾಟೀಲ, ಹಾಗೂ ಕಾರಾಗೃಹದ ಲಿಪಿಕ/ಕಾರ್ಯನಿರ್ವಾಹಕ ಅಧಿಕಾರಿ/ಸಿಬ್ಬಂದಿಗಳು ಭಾಗವಹಿಸಿದ್ದರು. ಈ ಸಂಸ್ಥೆಯ ಶಿಕ್ಷಕರಾದ ನಾಗರಾಜ ಮುಲಗೆ ಕಾರ್ಯಕ್ರಮ ನಿರೂಪಿಸಿದರು.







